ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ವಿಷಕಾರಿ ಹಾವು ಕಡಿದು ಅಸ್ವಸ್ಥಗೊಂಡ ನಾಲ್ಕು ವರ್ಷದ ಬಾಲಕಿಯೊಬ್ಬಳಿಗೆ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಸಮಯೋಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ನಡೆದಿದೆ.

ತಾಲೂಕಿನ ಗ್ರಾಮವೊಂದರಲ್ಲಿ ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ವೇಳೆ, ಗೋಡೆಯ ಹಗ್ಗದ ಮೇಲಿದ್ದ ವಿಷಕಾರಿ ಹಾವು ಏಕಾಏಕಿ ಬಾಲಕಿಯ ತಲೆಗೆ ಕಚ್ಚಿದೆ. ಪರಿಣಾಮ ತಲೆಯಿಂದ ರಕ್ತಸ್ರಾವವಾಗಿದ್ದು, ಕುಟುಂಬಸ್ಥರು ಕೂಡಲೇ ಆಕೆಯನ್ನು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯ ವೈದ್ಯ ಡಾ. ಸಂದೀಪ ಹೆಗಡೆ ಅವರ ನೇತೃತ್ವದ ವೈದ್ಯಕೀಯ ತಂಡ ತಕ್ಷಣ ಅಗತ್ಯ ಚಿಕಿತ್ಸೆ ನೀಡಿದ್ದು, ಕೆಲ ಗಂಟೆಗಳ ಕಾಲ ತೀವ್ರ ನಿಗಾದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದೆ. ಇದರ ಪರಿಣಾಮ ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಆಕೆ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಮಯೋಚಿತವಾಗಿ ಸ್ಪಂದಿಸಿ ಬಾಲಕಿಯ ಜೀವ ಉಳಿಸಿದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಕಾರ್ಯವನ್ನು ಕುಟುಂಬಸ್ಥರು ಶ್ಲಾಘಿಸಿದ್ದು, ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

 

Please Share: