ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ವಿತರಿಸಲಾಗುವ 1.75 ಟನ್ (1,750 ಕೆಜಿ) ಸರ್ಕಾರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ಕಿ ಹಾಗೂ ವಾಹನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಕೊರಕೋಡ-ಕುಪಗಡ್ಡೆ ನಿವಾಸಿ ಸಚಿನ್ ನಾಗರಾಜ ಗೌಡ (26) ವಿರುದ್ಧ ದೂರು ದಾಖಲಾಗಿದೆ.

ಯಾವುದೇ ಇಲಾಖೆಯಿಂದ ಅಥವಾ ಸಂಬಂಧಿತ ಪ್ರಾಧಿಕಾರದಿಂದ ಅಗತ್ಯ ಪರವಾನಗಿ ಪಡೆಯದೇ, ಬನವಾಸಿ ಕೋರ್ಲಕಟ್ಟಾ ಭಾಗದ ಸಾರ್ವಜನಿಕರಿಂದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.

ಜು.26ರಂದು ರಾತ್ರಿ ಸುಮಾರು 11.50 ಗಂಟೆಗೆ ಬನವಾಸಿ-ದಾಸನಕೊಪ್ಪ ರಸ್ತೆಯ ದಾಸನಕೊಪ್ಪ ಕ್ರಾಸ್ ಬಳಿ ತಹಶೀಲ್ದಾರರ ಸೂಚನೆಯ ಮೇರೆಗೆ ಕಚೇರಿ ಸಿಬ್ಬಂದಿ ಹಾಗೂ ಬನವಾಸಿ ಪೊಲೀಸರು ಕೆಎ-51/ಎಬಿ-5750 ಸಂಖ್ಯೆಯ ವಾಹನವನ್ನು ತಡೆದು ಪರಿಶೀಲಿಸಿದರು. ಈ ವೇಳೆ ವಾಹನದಲ್ಲಿ 33 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 1,750 ಕೆಜಿ 4 ಗ್ರಾಂ ತೂಕದ, ಸುಮಾರು ₹59,501.36 ಮೌಲ್ಯದ ಅಕ್ಕಿ ಪತ್ತೆಯಾಗಿದೆ.

ಆಹಾರ ನಿರೀಕ್ಷಕಿ ಕವಿತಾ ಎಸ್. ಪಾಟಣಕರ ಪರಿಶೀಲನೆ ನಡೆಸಿ, ವಶಪಡಿಸಿಕೊಂಡ ಅಕ್ಕಿಯು ಅನ್ನಭಾಗ್ಯ ಯೋಜನೆಯ ಸರ್ಕಾರಿ ಪಡಿತರ ಅಕ್ಕಿಯೇ ಎಂಬುದನ್ನು ಖಚಿತಪಡಿಸಿದರು. ಬಳಿಕ ಅಕ್ಕಿ ಹಾಗೂ ವಾಹನವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

 

 

Please Share: