ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಮನೆಯಿಂದ ಹೊರಹೋದ ಬಳಿಕ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಕ ಬಾಲಕನನ್ನು ಕದ್ರಾ ಪೊಲೀಸರು ಬಾಗಲಕೋಟೆಯಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Banner Ad

ಅ. 5ರಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಹೋದ ಬಾಲಕ ಮರಳಿ ಬಾರದ ಹಿನ್ನೆಲೆಯಲ್ಲಿ, ಯಾರೋ ಪುಸಲಾಯಿಸಿ ಅಪಹರಿಸಿರಬಹುದೆಂದು ಶಂಕಿಸಿ ಪೋಷಕರು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಕದ್ರಾ ಪಿಎಸ್‌ಐ ಕೃಷ್ಣಕಾಂತ ಅಯ್ಯಪ್ಪ ಪಾಟೀಲ್ ನೇತೃತ್ವದ ತಂಡವು ಕದ್ರಾ, ಕಾರವಾರ, ಅಂಕೋಲಾ, ಯಲ್ಲಾಪುರ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಗೋವಾ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿತ್ತು. ನಿರಂತರ ಕಾರ್ಯಾಚರಣೆ ಬಳಿಕ ಅ. 28ರಂದು ಬಾಲಕ ಬಾಗಲಕೋಟೆಯಲ್ಲಿ ಪತ್ತೆಯಾಗಿದ್ದಾನೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಕಾರವಾರ ಉಪವಿಭಾಗದ ಡಿವೈಎಸ್‌ಪಿ ಬಿ.ಎಸ್. ಲೋಕಾಪುರ ಹಾಗೂ ಕದ್ರಾ ವೃತ್ತ ನಿರೀಕ್ಷಕ ಪ್ರಭಾಕರ ಧರ್ಮಟ್ಟಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು. ಬಾಲಕನ ಪತ್ತೆ ಕಾರ್ಯದಲ್ಲಿ ಕದ್ರಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದು, ಜಿಲ್ಲಾ ಪೊಲೀಸ್ ಇಲಾಖೆ ತಂಡದ ಕಾರ್ಯವನ್ನು ಅಭಿನಂದಿಸಿದೆ.

 

Please Share: