ಕರಾವಳಿ ವಾಯ್ಸ್ ನ್ಯೂಸ್
ಮಂಗಳೂರು: ಮದುವೆಯಾಗಿ ಮಕ್ಕಳಿರುವ ಧರ್ಮಗುರು ಜೊತೆ ಕುಮಟಾದ 22 ವರ್ಷದ ಯುವತಿ ತೆರಳಿರುವ ಘಟನೆ ಮಂಗಳೂರು ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯ ನಿರ್ಧಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಮಗಳನ್ನು ಮರಳಿ ಮನೆಗೆ ಕರೆತರಲು ಮಾಡಿದ ಪ್ರಯತ್ನ ವಿಫಲವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ ಪುತ್ರಿ ಮಗದುಮ್ಮ (22), ಮಂಗಳೂರಿನ ಅಸೈಗೋಳಿ ನಿವಾಸಿ, 40 ವರ್ಷದ ಧರ್ಮಗುರು ಅಶ್ರಫ್ ಸ ಅದಿ ಅವರೊಂದಿಗೆ ತೆರಳಿದ ಯುವತಿ ಎಂದು ತಿಳಿದುಬಂದಿದೆ. ಅಶ್ರಫ್ ಸ ಅದಿ ಅವರು ಈಗಾಗಲೇ ವಿವಾಹಿತರಾಗಿದ್ದು, ಮಕ್ಕಳನ್ನೂ ಹೊಂದಿದ್ದಾರೆ. ಇವರು ಹಲವು ವರ್ಷಗಳ ಕಾಲ ಕುಮಟಾದ ಮದ್ರಸಾವೊಂದರಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.
ಮಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಕುಟುಂಬಸ್ಥರು, ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬಳಿಕ ಪೊಲೀಸರು ಯುವತಿ ಹಾಗೂ ಧರ್ಮಗುರು ಅಶ್ರಫ್ ಸ ಅದಿ ಅವರನ್ನು ಠಾಣೆಗೆ ಕರೆಸಿದ್ದಾರೆ.
ಯುವತಿ ವಯಸ್ಕಳಾಗಿರುವುದರಿಂದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಎಷ್ಟೇ ಕಾಡಿ ಬೇಡಿಕೊಂಡರೂ ಮನೆಗೆ ಮರಳಲು ಯುವತಿ ನಿರಾಕರಿಸಿದ್ದಾಳೆ. ಧರ್ಮಗುರು ಅಶ್ರಫ್ ಸ ಅದಿ ಅವರೊಂದಿಗೇ ತೆರಳುವುದಾಗಿ ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ.
ತಮ್ಮ ಕಣ್ಣೆದುರೇ ಮಗಳು ತಮ್ಮನ್ನು ಬಿಟ್ಟು ತೆರಳುವುದನ್ನು ಕಂಡ ಪೋಷಕರು ಠಾಣೆಯ ಅಂಗಳದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಗಳನ್ನು ಮರಳಿ ಮನೆಗೆ ಕರೆತರಲು ಸಾಧ್ಯವಾಗದ ನೋವಿನಲ್ಲಿ ಕುಟುಂಬಸ್ಥರು ಕಣ್ಣೀರಿಟ್ಟ ಘಟನೆ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.


