ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕೈಗಾ ಮತ್ತು ಸುತ್ತಮುತ್ತಲಿನ ಪ್ರದೇಶದ ಪಕ್ಷಿ ವೈವಿಧ್ಯತೆಯನ್ನು ಗುರುತಿಸುವ ಉದ್ದೇಶದಿಂದ ಎನ್‌ಪಿಸಿಐಎಲ್‌ನ ಕೈಗಾ ಘಟಕವು 17ನೇ ಆವೃತ್ತಿಯ ‘ಕೈಗಾ ಬರ್ಡ್ ಮ್ಯಾರಥಾನ್–2027’ ಅನ್ನು ಫೆಬ್ರವರಿ 6 ಮತ್ತು 7ರಂದು ಆಯೋಜಿಸಲಿದೆ.

Banner Ad

ಕಳೆದ 16 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆಯುತ್ತಿರುವ ಈ ವಿಶಿಷ್ಟ ಪಕ್ಷಿ ಸಮೀಕ್ಷೆಯಲ್ಲಿ ಈವರೆಗೆ ಸುಮಾರು 315 ಪಕ್ಷಿ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS), ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಸಂಸ್ಥೆಗಳ ವಿಜ್ಞಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಭಾಗವಹಿಸಿದ್ದರು.

ಈ ಬಾರಿ ಭಾಗವಹಿಸುವವರನ್ನು ಅನುಭವ ಮತ್ತು ಪರಿಣತಿಯ ಆಧಾರದಲ್ಲಿ ಒಂಬತ್ತು ತಂಡಗಳಾಗಿ ವಿಂಗಡಿಸಿ, ವಿವಿಧ ಪ್ರದೇಶಗಳಲ್ಲಿ ಪಕ್ಷಿ ಸಮೀಕ್ಷೆ ನಡೆಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ 50 ಹೊರಗಿನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತಿದ್ದು, ಉಳಿದವರನ್ನು ಎನ್‌ಪಿಸಿಐಎಲ್ ಸಿಬ್ಬಂದಿ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಆಯ್ಕೆ ಮಾಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 2026ರ ಅಕ್ಟೋಬರ್ 22ರಿಂದ ನೋಂದಣಿ ಆರಂಭವಾಗಿದ್ದು, ನವೆಂಬರ್ 30 ಕೊನೆಯ ದಿನವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9448999751, 8277120019 ಅಥವಾ 9448991753 ಸಂಪರ್ಕಿಸಬಹುದು. ಇ-ಮೇಲ್: birdingkaiga@gmail.com.

 

 

Please Share: