ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ: ಇಲ್ಲಿನ ಪಟೇಲ್ ನಗರದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Banner Ad

ಪಟೇಲ್ ನಗರದ ಹಿಂದೂ ರುದ್ರಭೂಮಿಯ ಆವರಣದಲ್ಲಿ ಚಿರತೆ ಸಂಚರಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ರಾತ್ರಿಯ ವೇಳೆ ಚಿರತೆ ರಾಜಾರೋಷವಾಗಿ ಸಂಚರಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಕೆಲವರು ಅದನ್ನು ಗಮನಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ರುದ್ರಭೂಮಿ ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಈಗಾಗಲೇ ದಾಂಡೇಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾಗೂ ಕಪ್ಪು ಚಿರತೆಗಳ ಓಡಾಟದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ತೆರಳದಂತೆ ಹಾಗೂ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಹಸನ್ಮಾಳ, ಅಂಬೆವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿದ ಘಟನೆಗಳೂ ನಡೆದಿವೆ. ಇದೀಗ ಪಟೇಲ್ ನಗರದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಚಿರತೆಯ ಚಲನವಲನದ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿ, ಜನವಸತಿ ಪ್ರದೇಶದಲ್ಲಿ ಅದರ ಓಡಾಟ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

 

Please Share: