ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಮನೆಯ ಹಿತ್ತಲಲ್ಲಿ ಇಟ್ಟಿದ್ದ ಕಳೆನಾಶಕವನ್ನು ತಂಪುಪಾನೀಯವೆಂದು ಭಾವಿಸಿ ಸೇವಿಸಿದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ತಾಲೂಕಿನ ಕಿಲ್ಲೆ ಓಣಿಯ ಮೌಲಾಲಿ ಗೌಸಮಿಯ ಬನ್ನುರು (52) ಮೃತಪಟ್ಟವರು. ಅ. 8ರಂದು ಸಂಜೆ ಮನೆಯ ಹಿತ್ತಲಲ್ಲಿ ಕಸ ತೆಗೆಯುತ್ತಿದ್ದ ವೇಳೆ, ಈ ಹಿಂದೆ ಕಳೆ ತೆಗೆಯಲು ಬಳಸಿದ್ದ ಕಳೆನಾಶಕವನ್ನು ಹಸಿರು ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದನ್ನು ತಂಪುಪಾನೀಯವೆಂದು ಭಾವಿಸಿ ಆಕಸ್ಮಿಕವಾಗಿ ಸೇವಿಸಿದ್ದರು ಎನ್ನಲಾಗಿದೆ.
ಅಸ್ವಸ್ಥಗೊಂಡ ಅವರನ್ನು ಮುಂಡಗೋಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅ. 11ರಂದು ಸಂಜೆ 6.10ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಪುತ್ರ ಹಜರೆಸಾಬ ಬನ್ನುರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 33/2026ರ ಅಡಿಯಲ್ಲಿ ಬಿಎನ್ಎಸ್ಎಸ್ ಕಲಂ 194ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.


