ಕರಾವಳಿ ವಾಯ್ಸ ನ್ಯೂಸ್ 

ಜೋಯಿಡಾ: ತಾಲೂಕಿನ ಜಗಲಬೆಟ್–ರಾಮನಗರ ಮುಖ್ಯರಸ್ತೆಯ ಚಾಂದವಾಡಿ ಕ್ರಾಸ್ ಸಮೀಪ ಗುರುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದು ಎಮ್ಮೆ ಮತ್ತು ಎರಡು ಕರುಗಳು ಮೃತಪಟ್ಟಿದ್ದು, ನಾಲ್ಕು ಎಮ್ಮೆಗಳು ಗಾಯಗೊಂಡಿವೆ.

Banner Ad

ಮಾಹಿತಿಯ ಪ್ರಕಾರ, ರಸ್ತೆ ದಾಟುತ್ತಿದ್ದ ಎಮ್ಮೆಗಳ ಹಿಂಡಿನ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಿಲುಕಿದ್ದು, ಏಕಾಏಕಿ ಜಾನುವಾರುಗಳು ವಾಹನದ ಮುಂದೆ ಬಂದ ಕಾರಣ ಚಾಲಕನಿಗೆ ವಾಹನವನ್ನು ಸಂಪೂರ್ಣ ನಿಯಂತ್ರಿಸುವುದು ಸಾಧ್ಯವಾಗಿಲ್ಲ ಎನ್ನಲಾಗಿದೆ. ಪರಿಣಾಮ ಬಸ್ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಒಂದು ಎಮ್ಮೆ ಹಾಗೂ ಎರಡು ಕರುಗಳು ಸ್ಥಳದಲ್ಲೇ ಮೃತಪಟ್ಟಿವೆ. ಗಾಯಗೊಂಡ ನಾಲ್ಕು ಎಮ್ಮೆಗಳಿಗೆ ಸ್ಥಳೀಯರ ಸಹಕಾರದೊಂದಿಗೆ ಪ್ರಾಥಮಿಕ ನೆರವು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯಿಂದ ಬಸ್‌ನ ಮುಂಭಾಗಕ್ಕೂ ಹಾನಿಯಾಗಿದ್ದು, ಪ್ರಯಾಣಿಕರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 

Please Share: