ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ಅಪಾಯಕಾರಿ ರಾಸಾಯನಿಕ ಮಿಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾದ ಘಟನೆ ಸೋಮವಾರ ತಾಲೂಕಿನ ಇಡಗುಂದಿ ಸಮೀಪ ನಡೆದಿದೆ. ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿದ್ದ ರಾಸಾಯನಿಕ ಸೋರಿಕೆಯಾಗದೆ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸೋಮವಾರ ಮಧ್ಯಾಹ್ನದ ವೇಳೆ ಘಟನೆ ಸಂಭವಿಸಿದ್ದು, ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಿಥೆನಾಲ್ ಸೋರಿಕೆಯಾದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ತಾಂತ್ರಿಕ ಸಿಬ್ಬಂದಿಯೂ ಸ್ಥಳದಲ್ಲಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡರು.
ಟ್ಯಾಂಕರ್ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದ್ದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾಗಿದ್ದ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ಟ್ಯಾಂಕರ್ ತೆರವುಗೊಳಿಸಿದ ಬಳಿಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ಸಹಜಗೊಳಿಸಿದರು. ಘಟನೆಯಿಂದ ಯಾವುದೇ ದೊಡ್ಡ ಪ್ರಮಾಣದ ಅನಾಹುತ ಸಂಭವಿಸದೆ ತಪ್ಪಿದಂತಾಗಿದೆ.
ಘಟನೆಗೆ ನಿಖರ ಕಾರಣ ಹಾಗೂ ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿದ್ದ ಮಿಥೆನಾಲ್ ಪ್ರಮಾಣ ಸೇರಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
