ಕರಾವಳಿ ವಾಯ್ಸ್ ನ್ಯೂಸ್
ಶಿರಸಿ, ಜೂನ್ 19: ಗೋವಾ ರಾಜ್ಯದಿಂದ ಅಗತ್ಯ ಪಾಸ್ ಅಥವಾ ಪರವಾನಗಿ ಇಲ್ಲದೆ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ದಾವಣಗೆರೆ ಜಿಲ್ಲೆಯ ಇಬ್ಬರನ್ನು ಬನವಾಸಿ ಪೊಲೀಸರು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ.
ಬಂಧಿತರನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದ ಅರುಣ್ ರಾಮಚಂದ್ರ ರಾವ್ (35) ಹಾಗೂ ರಾಘವೇಂದ್ರ ಫಕ್ಕಿರಪ್ಪ (43) ಎಂದು ಗುರುತಿಸಲಾಗಿದೆ.
ಶುಕ್ರವಾರರಂದು ಬೆಳಿಗ್ಗೆ ಸುಮಾರು 3.30 ಗಂಟೆಗೆ ಗೋವಾದಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ಹುಂಡೈ ವೆನ್ಯೂ ಕಾರು (ಕೆಎ-17 ಎಂಎ-3075)ಯನ್ನು ಬನವಾಸಿ–ಶಿರಸಿ ರಸ್ತೆಯ ಕದಂಬ ಸರ್ಕಲ್ ಸಮೀಪ ರಾತ್ರಿ ವಿಶೇಷ ಗಸ್ತಿನ ವೇಳೆ ಪೊಲೀಸರು ತಡೆದು ಪರಿಶೀಲನೆ ನಡೆಸಿದರು.
ಪರಿಶೀಲನೆಯ ವೇಳೆ ಕಾರಿನೊಳಗೆ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಲಾಗಿದ್ದ ಐದು ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟು 60 ಮದ್ಯದ ಬಾಟಲಿಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ ₹22,200 ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಮನೆಯ ಕಾರ್ಯಕ್ರಮಕ್ಕಾಗಿ ಮದ್ಯವನ್ನು ಸಾಗಿಸುತ್ತಿದ್ದುದಾಗಿ ತಿಳಿಸಿದ್ದರೂ, ಮದ್ಯ ಸಾಗಾಟಕ್ಕೆ ಅಗತ್ಯವಿರುವ ಯಾವುದೇ ಪಾಸ್ ಅಥವಾ ಪರವಾನಗಿ ಹೊಂದಿರದಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಮದ್ಯ, ಪೆಟ್ಟಿಗೆಗಳು ಹಾಗೂ ಕಾರನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಉಪನಿರೀಕ್ಷಕ ರವೀಂದ್ರ ಬಿರಾದಾರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
