ಕರಾವಳಿ ವಾಯ್ಸ್ ನ್ಯೂಸ್ 

ಹಳಿಯಾಳ: ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಭಾನುವಾರ ಜಂಟಿ ದಾಳಿ ನಡೆಸಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Banner Ad

ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಬಸವರಾಜ ಮಬನೂರ ನೇತೃತ್ವದ ತಂಡ ತೆಗ್ನಳ್ಳಿ ಕ್ರಾಸ್ ಸಮೀಪದ ಕಲ್ಲು ಕ್ವಾರಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಕಳೆದ ಕೆಲವು ದಿನಗಳಿಂದ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡು ದಾಳಿ ನಡೆಸಲಾಗಿತ್ತು.

ಕಾರ್ಯಾಚರಣೆಯ ವೇಳೆ ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಮೂಲದ ನಾಗರಾಜ ಸಿದ್ದಕನವರ್ ಈತನನ್ನು ಬಂಧಿಸಲಾಗಿದ್ದು, ಆರೋಪಿಯ ಬಳಿಯಿಂದ 72 ಜಿಲೇಟಿನ್ ಕಡ್ಡಿಗಳು ಹಾಗೂ 52 ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಸಂಗ್ರಹಿಸಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಹುಬ್ಬಳ್ಳಿಯ ಬಾಂಬ್ ನಿಷ್ಕ್ರಿಯ ದಳ ಹಾಗೂ ಕಾರವಾರದ ಎಸಿಎಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಕ ವಸ್ತುಗಳ ಪರಿಶೀಲನೆ ನಡೆಸಿ, ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ವಶಕ್ಕೆ ಪಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಕಲಘಟಗಿ ಭಾಗದ ಹನುಮಂತ ಎಂಬುವವರಿಂದ ಸ್ಫೋಟಕಗಳನ್ನು ಪಡೆದಿರುವುದು ಬಹಿರಂಗವಾಗಿದ್ದು, ಸ್ಫೋಟಕಗಳ ಮೂಲ, ಸಾಗಾಟ ಮಾರ್ಗ ಹಾಗೂ ಇತರರ ಸಂಪರ್ಕದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

 

 

Please Share: