ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಪಟ್ಟಣದ ಬಿಸಗೋಡ ರಸ್ತೆ ಮಾರ್ಗದ ಸ್ಮಶಾನದ ಪಕ್ಕದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

Banner Ad

ಬಂಧಿತರನ್ನು ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ಧಿ, ಅಂಕೋಲಾ ತಾಲೂಕಿನ ಕಮ್ಮಾಣಿಯ ರವಿ ಕೃಷ್ಣ ಸಿದ್ಧಿ, ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ಧಿ ಹಾಗೂ ಲಕ್ಷ್ಮಣ ಪ್ರಭಾಕರ ಸಿದ್ಧಿ ಎಂದು ಗುರುತಿಸಲಾಗಿದೆ. ವಜ್ರಳ್ಳಿಯ ಸತೀಶ ಸಿದ್ಧಿ ಎಂಬಾತ ಪರಾರಿಯಾಗಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳಿಂದ ಒಟ್ಟು 58.80 ಕೆಜಿ ಶ್ರೀಗಂಧ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 3.80 ಕೆಜಿ ತೂಕದ ಸಿಪ್ಪೆ ಕೆತ್ತಿದ 12 ಶ್ರೀಗಂಧದ ತುಂಡುಗಳು ಹಾಗೂ 55 ಕೆಜಿ ತೂಕದ ಸಿಪ್ಪೆ ಸಹಿತ 17 ಶ್ರೀಗಂಧದ ತುಂಡುಗಳು ಸೇರಿವೆ. ಕೃತ್ಯಕ್ಕೆ ಬಳಸಿದ್ದ KA-31 KE-4658 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಕೂಡ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳು ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ಪ್ರವೃತ್ತಿ ಹೊಂದಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್‌ 84, 86, 87, 71(ಎ) ಹಾಗೂ ಕರ್ನಾಟಕ ಅರಣ್ಯ ನಿಯಮ-1969ರ ನಿಯಮ 144 ಮತ್ತು 155ರ ಅಡಿಯಲ್ಲಿ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಎ. ಶೇಖ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಚ್. ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

 

 

 

 

 

 

Please Share: