ಕರಾವಳಿ ವಾಯ್ಸ್ ನ್ಯೂಸ್
ಹಳಿಯಾಳ: ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ವಾಹನದಲ್ಲಿ ತೆರಳುತ್ತಿದ್ದ ಯುವಕನಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಪಟ್ಟಣದ ಕುಸ್ತಿ ಅಖಾಡ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ಭಜಂತ್ರಿ ಗಲ್ಲಿಯ ಭರತ್ ಮೊರೆ (29) ಚಾಕು ಇರಿತಕ್ಕೊಳಗಾದ ಯುವಕ. ಭುಜ ಹಾಗೂ ಕಿವಿಗೆ ಚಾಕುವಿನಿಂದ ಇರಿತವಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಭರತ್ ಮೊರೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಹಳಿಯಾಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಕು ಇರಿತ ನಡೆಸಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


