ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ವಿಭೂತಿ ಜಲಪಾತದಲ್ಲಿ ನೀರಿನ ಗುಂಡಿಗೆ ಜಾರಿ ಬಿದ್ದು ಮುಳುಗುತ್ತಿದ್ದ ಚೆನ್ನೈ ಮೂಲದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಚೆನ್ನೈನಿಂದ ಒಟ್ಟು 9 ಜನ ಪ್ರವಾಸಿಗರು ದಾಂಡೇಲಿ ಪ್ರವಾಸ ಮುಗಿಸಿ ಶುಕ್ರವಾರರಂದು ಬೆಳಿಗ್ಗೆ 11.50ರ ಸುಮಾರಿಗೆ ವಿಭೂತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ನೀರಿಗೆ ಇಳಿದ ಪ್ರವಾಸಿಗರು ಜಲಪಾತದ ಸಮೀಪದ ಬಂಡೆಯ ಮೇಲೆ ಕುಳಿತು ಮೋಜು ಮಾಡುತ್ತಿದ್ದಾಗ, ಗಜಪತಿ (25) ಎಂಬಾತ ಸುಮಾರು 20 ಅಡಿ ಆಳದ ನೀರಿನ ಗುಂಡಿಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾನೆ.
ಗಜಪತಿಗೆ ಈಜಲು ಬಾರದಿರುವುದನ್ನು ಗಮನಿಸಿದ ಸ್ನೇಹಿತ ಅಶ್ವತ್ ಆತನನ್ನು ರಕ್ಷಿಸಲು ಮುಂದಾಗಿದ್ದರೂ ಸಾಧ್ಯವಾಗಿರಲಿಲ್ಲ. ಇದನ್ನು ಗಮನಿಸಿದ ಜಲಪಾತದ ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ್ ತಕ್ಷಣ ಸ್ಥಳಕ್ಕೆ ಧಾವಿಸಿ ರೆಸ್ಕ್ಯೂ ಟ್ಯೂಬ್ ಬಳಸಿ ಮುಳುಗುತ್ತಿದ್ದ ಗಜಪತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ಜೀವರಕ್ಷಕ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಸ್ಥಳದಲ್ಲಿದ್ದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.


