ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸರಕಾರದ ಗಮನಕ್ಕೂ ಬಾರದೆ ಕರ್ನಾಟಕದಿಂದ ಗೋವಾಕ್ಕೆ ಮದ್ಯಸಾರ (ENA) ಸಾಗಾಟ! ಕೋಟ್ಯಂತರ ರೂ. ಆದಾಯಕ್ಕೆ ಕತ್ತರಿ ಹಾಕುವ ಈ ಅಕ್ರಮದ ಹಿಂದೆ ಅಬಕಾರಿ ಅಧಿಕಾರಿಗಳೇ ಶಾಮೀಲಾಗಿದ್ದಾರೆಯೇ? ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಖಡಕ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ವಿರುದ್ಧ ಸಚಿವ ಲಕ್ಷ್ಮಣ ಸವದಿ ಸ್ಫೋಟಕ ಆರೋಪಗಳನ್ನೇ ಮಾಡಿದರು.

Banner Ad

ಸಭೆ ಮುಕ್ತಾಯದ ಹಂತಕ್ಕೆ ಬಂದರೂ ಅಬಕಾರಿ ಜಿಲ್ಲಾಧಿಕಾರಿ ಹಾಜರಾಗದಿರುವುದು ಸಚಿವರ ಆಕ್ರೋಶಕ್ಕೆ ಕಾರಣವಾಯಿತು. ಕರ್ನಾಟಕದಿಂದ ಗೋವಾಕ್ಕೆ ENA ಸಾಗಣೆಯಾಗುತ್ತಿರುವ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ. ಈ ಅಕ್ರಮ ಸರಕಾರದ ಗಮನಕ್ಕೂ ಬಂದಿಲ್ಲ ಎಂದರೆ ಇಲಾಖೆಯ ಕಾರ್ಯವೈಖರಿ ಎಷ್ಟು ನಿರ್ಲಕ್ಷ್ಯದಿಂದ ಕೂಡಿದೆ ಎಂದು ಪ್ರಶ್ನಿಸಿದರು.

ಈಗಾಗಲೇ ತನಿಖಾ ಠಾಣೆಯಲ್ಲಿ ಮೂರು ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವು ದಾವಣಗೆರೆ ಶುಗರ್ ಫ್ಯಾಕ್ಟರಿಯಿಂದ ಬಂದಿದ್ದವು ಎಂದು ಅಬಕಾರಿ ಇನ್ಸ್‌ಪೆಕ್ಟರ್ ತಿಳಿಸಿದರು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಸಚಿವರು, “ನೀವು ಹಿಡಿಯದೆ ಇರುವ ಟ್ಯಾಂಕರ್‌ಗಳು ಎಷ್ಟಿವೆ? ಯಾವುದೇ ಡಿಸ್ಟಿಲರಿಯಿಂದ ಟ್ಯಾಂಕರ್ ಹೊರಬರಬೇಕಾದರೆ ಅನುಮತಿ ಕಡ್ಡಾಯ. ಹಾಗಿದ್ದರೆ ಗೋವಾಕ್ಕೆ ಹೇಗೆ ಸಾಗುತ್ತಿದೆ?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

“ಯಾವ ಯಾವ ಫ್ಯಾಕ್ಟರಿಯಿಂದ ಎಷ್ಟು ENA ಗೋವಾಕ್ಕೆ ಹೋಗುತ್ತಿದೆ ಎಂಬ ಮಾಹಿತಿ ನನ್ನ ಬಳಿಯಿದೆ. ನಿಮ್ಮ ಇಲಾಖೆಯವರೇ ಈ ಅಕ್ರಮವನ್ನು ಸೃಷ್ಟಿ ಮಾಡಿದ್ದೀರಿ. ಇದರಿಂದ ಸರಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ಆದಾಯ ನಿಂತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ” ಎಂದು ಸಚಿವರು ಗಂಭೀರ ಆರೋಪ ಮಾಡಿದರು.

ಅಧಿಕಾರಿಗಳಿಗೆ ಮನೆಗೆ ಹೋಗುವ ಎಚ್ಚರಿಕೆ!
“ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ನಾನು ಉಸ್ತುವಾರಿ ಸಚಿವನಾಗಿದ್ದೇನೆ. ಇನ್ನು ಮುಂದೆ ಹುಷಾರಾಗಿರಿ, ನಿಮಗೆ ಬಲೆ ಹಾಕುತ್ತೇನೆ. ಮತ್ತೊಂದು ಟ್ಯಾಂಕರ್ ಹೋದರೂ ನಾನಂತೂ ಬಿಡುವುದಿಲ್ಲ. ಅಕ್ರಮ ಸಾಗಾಟ ಮುಂದುವರಿದರೆ ಅಬಕಾರಿ ಜಿಲ್ಲಾಧಿಕಾರಿ ಸಹಿತ ಎಲ್ಲರೂ ಮನೆಗೆ ಹೋಗಬೇಕಾಗುತ್ತದೆ” ಎಂದು ಸಚಿವರು ಎಚ್ಚರಿಕೆ ನೀಡಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಮಟ್ಟದ ಸಭೆಯಲ್ಲಿ ಸಚಿವರೇ ಅಬಕಾರಿ ಇಲಾಖೆಯ ವಿರುದ್ಧ ಇಂತಹ ಸ್ಫೋಟಕ ಆರೋಪ ಮಾಡಿರುವುದು ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

Please Share: