ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಕರಾವಳಿ ಭಾಗದಲ್ಲಿ ಕಾಡುಪ್ರಾಣಿ-ಮಾನವ ಸಂಘರ್ಷ ಮಿತಿಮೀರುತ್ತಿದ್ದು, ತಾಲ್ಲೂಕಿನ ಧಾರೇಶ್ವರ ಸಮೀಪದ ಹರನೀರು ಗ್ರಾಮದಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆಯಾಗಿದೆ.

Banner Ad

ಕಳೆದ ಮೂರು ದಿನಗಳ ಹಿಂದೆಯಷ್ಟೇ ಹರನೀರು ಗ್ರಾಮದಲ್ಲಿ ಎರಡು ಕರುಗಳ ಮೇಲೆ ಎರಡು ಚಿರತೆಗಳು ಏಕಾಏಕಿ ದಾಳಿ ಮಾಡಿ, ಎಳೆದೊಯ್ಯಲು ಯತ್ನಿಸಿದ್ದವು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಚಿರತೆಗಳನ್ನು ಓಡಿಸಿ ಕರುಗಳನ್ನು ರಕ್ಷಿಸಿದ್ದರು. ಆದರೆ, ದಾಳಿಯಿಂದ ಕರುಗಳು ತೀವ್ರವಾಗಿ ಗಾಯಗೊಂಡಿದ್ದವು.

ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಗಳನ್ನು ಸೆರೆಹಿಡಿಯಲು ಗ್ರಾಮದಲ್ಲಿ ಪಂಜರಗಳನ್ನು ಇರಿಸಿದ್ದರು. ಇದೀಗ ಒಂದು ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಹರನೀರು ಗ್ರಾಮವು ಸಂಪೂರ್ಣವಾಗಿ ಅಕೇಶಿಯಾ ಮರಗಳಿಂದ ಆವೃತವಾಗಿದ್ದು, ದಟ್ಟ ಅರಣ್ಯದಂತಹ ವಾತಾವರಣ ನಿರ್ಮಾಣವಾಗಿದೆ. ವ್ಯವಸಾಯವನ್ನೇ ತಮ್ಮ ಜೀವನದ ಮುಖ್ಯ ಆಧಾರವಾಗಿಸಿಕೊಂಡಿರುವ ಇಲ್ಲಿನ ರೈತರು, ಕಾಡುಪ್ರಾಣಿಗಳ ನಿರಂತರ ಹಾವಳಿ ಹಾಗೂ ಬೆಳೆ ಹಾನಿಯಿಂದಾಗಿ ಬೇಸತ್ತು ಕೃಷಿಯಿಂದಲೇ ವಿಮುಖರಾಗುವಂತಹ ದುಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಕಾಡುಹಂದಿ, ಮಂಗ, ಕಾಡುಬೆಕ್ಕು, ಹೆಬ್ಬಾವು, ನಾಗರಹಾವು ಸೇರಿದಂತೆ ವಿವಿಧ ವಿಷಪೂರಿತ ಹಾವುಗಳ ಹಾವಳಿ ಮಿತಿಮೀರಿದೆ. ಇವುಗಳ ಜೊತೆಗೆ ಚಿರತೆಗಳ ಕಾಟವೂ ಹೆಚ್ಚಾಗಿರುವುದರಿಂದ, ಜನರು ತಮ್ಮ ದೈನಂದಿನ ಜೀವನ ನಡೆಸಲು ಹಾಗೂ ಕಾಡಂಚಿನಲ್ಲಿ ಓಡಾಡಲು ಭಯಪಡುವಂತಾಗಿದೆ.

ಗ್ರಾಮದಲ್ಲಿನ ಬೀದಿ ನಾಯಿಗಳು ಹಾಗೂ ಸಾಕು ದನಕರುಗಳು ಚಿರತೆಗಳಿಗೆ ಸುಲಭದ ಆಹಾರವಾಗುತ್ತಿವೆ. ಚಿರತೆಗಳ ನಿರಂತರ ಭೇಟೆಯಿಂದಾಗಿ ಈ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ. ವನ್ಯಜೀವಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಹಾಗೂ ಅಕೇಶಿಯಾ ಮರಗಳ ತೆರವಿಗೆ ಗ್ರಾಮಸ್ಥರು ಇಲಾಖೆಯನ್ನು ಆಗ್ರಹಿಸಿದ್ದಾರೆ.

 

 

Please Share: