ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ರಸ್ತೆಯಲ್ಲಿ ಕಾಳಗ ಮಾಡುತ್ತಿದ್ದ ಆಕಳ ಗುಂಪನ್ನು ತಪ್ಪಿಸಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ಚರಂಡಿ ತಡೆಗೋಡೆಗೆ ಗುದ್ದಿದ ಘಟನೆ ಗುರುವಾರ ಹಬ್ಬುವಾಡದ ಶ್ರೀ ದಾಸ ಮಾರುತಿ ದೇವಸ್ಥಾನದ ಬಳಿ ನಡೆದಿದೆ.

Banner Ad

ಕಾರವಾರ ನಗರದಿಂದ ಹಬ್ಬುವಾಡ ಕಡೆಗೆ ತೆರಳುತ್ತಿದ್ದ ಗೋವಾ ನೋಂದಣಿಯ ಜಿಎ 07 ಎನ್ 2735 ಕಾರು ದೇವಸ್ಥಾನದ ಬಳಿ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಆಕಳುಗಳು ಕಾಳಗ ಮಾಡುತ್ತಿದ್ದವು. ಈ ಸಂದರ್ಭದಲ್ಲಿ ಆಕಳ ಗುಂಪನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿ ಚರಂಡಿ ತಡೆಗೋಡೆಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಕಾರು ಒಂದು ಆಕಳಿಗೆ ಡಿಕ್ಕಿಯಾದ ಪರಿಣಾಮ ಆಕಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಅಸ್ವಸ್ಥವಾಗಿ ಬಿದ್ದಿತ್ತು. ಅಪಘಾತದಿಂದ ಚರಂಡಿ ತಡೆಗೋಡೆಗೂ ಹಾನಿಯಾಗಿದೆ.

ಘಟನೆ ತಿಳಿದು ಸ್ಥಳದಲ್ಲಿ ವಾಹನ ಸವಾರರು ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸಣ್ಣ ಕ್ರೇನ್‌ ಮೂಲಕ ಕಾರನ್ನು ಪೊಲೀಸ್ ಠಾಣೆಗೆ ಸಾಗಿಸಲಾಯಿತು. ಕಾರು ಸ್ಥಳೀಯ ಆಸಿಫ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

 

 

Please Share: