ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ, ಜೂನ್ 13: ತಾಲೂಕಿನ ಬೆಳಕೆ ಕಂಚಿಕೇರಿ ಪ್ರದೇಶದ ಬಾವಿಯೊಂದರಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

Banner Ad

ಮೃತ ವಿದ್ಯಾರ್ಥಿನಿಯನ್ನು ಗಾಯಿತ್ರಿ ನಾಗರಾಜ ನಾಯ್ಕ (19) ಎಂದು ಗುರುತಿಸಲಾಗಿದೆ. ಅವರು ಭಟ್ಕಳದ ಶ್ರೀ ಗುರುಸುಧೀಂದ್ರ ಕಾಲೇಜಿನ ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರು.

ಗಾಯಿತ್ರಿ ಗುರುವಾರದಿಂದ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅವರ ಪಾಲಕರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ, ಶುಕ್ರವಾರ ಅವರ ಮನೆಯ ಸಮೀಪ ಸಂಬಂಧಿಕರ ನಿವೇಶನದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಯಿತು.

ಮೃತರು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಲೇಜು ಶುಲ್ಕ ಪಾವತಿಗಾಗಿ ಮನೆಯವರು ನೀಡಿದ್ದ ಹಣವನ್ನು ಪರಿಚಿತ ಯುವಕನೊಬ್ಬನಿಗೆ ಸಾಲವಾಗಿ ನೀಡಿದ್ದಳು ಎನ್ನಲಾಗಿದ್ದು, ಆ ಹಣ ಮರಳಿ ಸಿಗದ ಕಾರಣ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ಸಾಧ್ಯವಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಅಧಿಕೃತ ದೃಢೀಕರಣವಾಗಿಲ್ಲ.

ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

Please Share: