ಕರಾವಳಿ ವಾಯ್ಸ್ ನ್ಯೂಸ್ 

ಬೆಂಗಳೂರು: ಅಪ್ರಾಪ್ತ ವಯಸ್ಸಿನವರ ಮದ್ಯಪಾನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ಮದ್ಯ ಖರೀದಿ ಮತ್ತು ಮದ್ಯಪಾನಕ್ಕೆ ಕನಿಷ್ಠ 21 ವರ್ಷ ವಯಸ್ಸು ಕಡ್ಡಾಯ ಎಂದು ಪುನರುಚ್ಚರಿಸಿದ್ದು, ನಿಯಮ ಉಲ್ಲಂಘಿಸುವ ಬಾರ್, ಪಬ್ ಹಾಗೂ ಮದ್ಯ ಮಾರಾಟ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Banner Ad

ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯ ಸೇವನೆಗೆ ಅವಕಾಶ ನೀಡುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದರು.

ಮದ್ಯ ಮಾರಾಟ ಸಂಸ್ಥೆಗಳು ಪ್ರತಿಯೊಬ್ಬ ಗ್ರಾಹಕರ ಗುರುತಿನ ಚೀಟಿ ಸಂಗ್ರಹಿಸುವ ಅಗತ್ಯವಿಲ್ಲ. ಆದರೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನಂತೆ ಕಾಣುವವರ ವಯಸ್ಸು ಪರಿಶೀಲಿಸಬೇಕು. ಅವರು ವಯಸ್ಕರೊಂದಿಗೆ ಬಂದಿದ್ದರೂ ಮದ್ಯ ಸೇವನೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಯುವಜನರನ್ನು ಮದ್ಯದ ದುಷ್ಪರಿಣಾಮಗಳಿಂದ ರಕ್ಷಿಸುವುದು ಹಾಗೂ ಜವಾಬ್ದಾರಿಯುತ ಮದ್ಯ ಮಾರಾಟ ಮತ್ತು ಸೇವನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ದೇಶನ ಜಾರಿಗೊಳಿಸಲಾಗಿದೆ.

ಮಾರಾಟ ಮತ್ತು ಸೇವನೆ ನಡೆಯುವ ಸ್ಥಳಗಳಲ್ಲಿ ಹದಿಹರೆಯದವರು ಮದ್ಯಪಾನ ಮಾಡದಂತೆ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಪರವಾನಗಿ ಪಡೆದ ಸಂಸ್ಥೆಗಳು ಗಂಭೀರ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

 

 

Please Share: