ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಬಂಧಿಸಲಾಗಿದ್ದ ಕಾರವಾರ ತಾಲೂಕಿನ ಬಿಣಗಾ ಕರಿದೇವಸ್ಥಾನದಿಂದ ಅರಗಾ ಶ್ರೀ ಮಹಾದೇವಸ್ಥಾನದ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇದೀಗ ಮತ್ತೆ ದ್ವಿಮುಖ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುಡ್ಡದಿಂದ ಕಲ್ಲು ಮತ್ತು ಮಣ್ಣು ಕುಸಿಯುವ ಅಪಾಯದ ಹಿನ್ನೆಲೆಯಲ್ಲಿ ಜುಲೈ 4ರಿಂದ ಈ ಮಾರ್ಗದಲ್ಲಿ ಕಾರವಾರದಿಂದ ಅಂಕೋಲಾ ಕಡೆಗೆ ತೆರಳುವ ರಸ್ತೆಯನ್ನು ನಿರ್ಬಂಧಿಸಿ, ಅಂಕೋಲಾದಿಂದ ಕಾರವಾರಕ್ಕೆ ಬರುವ ರಸ್ತೆಯಲ್ಲಿ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಈ ಹಿಂದಿನ ನಿರ್ಬಂಧದ ಆದೇಶವನ್ನು ಹಿಂಪಡೆದಿದ್ದಾರೆ.
ಅಕ್ಟೋಬರ್ 12ರಂದು ಹೊರಡಿಸಿರುವ ಆದೇಶದಂತೆ ಬಿಣಗಾ ಕರಿದೇವಸ್ಥಾನದಿಂದ ಅರಗಾ ಮಹಾದೇವಸ್ಥಾನದ ಕ್ರಾಸ್ವರೆಗಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮೊದಲಿನಂತೆ ದ್ವಿಮುಖ ವಾಹನ ಸಂಚಾರ ಪುನರಾರಂಭಗೊಂಡಿದೆ.


