ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಶಾಲಾ ಆವರಣದಲ್ಲಿರುವ ಅಪಾಯಕಾರಿ ಬೃಹತ್ ಮರ ತೆರವಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ನಾಯ್ಕ ಆರೋಪಿಸಿದ್ದಾರೆ.

Banner Ad

ಯಲ್ಲಾಪುರ ಪಟ್ಟಣದ ರವೀಂದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 52 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಆವರಣ ಚಿಕ್ಕದಾಗಿದ್ದು, ಅದರೊಳಗೇ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ತೀವ್ರ ಮಳೆ ಹಾಗೂ ಗಾಳಿ ಬೀಸಿದರೆ ಮರ ಉರುಳುವ ಸಾಧ್ಯತೆಯಿದ್ದು, ಮರದ ಮುಂಭಾಗದಲ್ಲೇ ವಿದ್ಯುತ್ ಲೈನ್ ಹಾದುಹೋಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಮಕ್ಕಳ ಸುರಕ್ಷತೆಗಿಂತ ಅಧಿಕಾರಿಗಳಿಗೆ ಇನ್ನೇನು ಮುಖ್ಯ? ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಅಪಾಯಕಾರಿ ಮರ ತೆರವುಗೊಳಿಸುವಂತೆ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ನಾಯ್ಕ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದು ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಮೂಡಿಸಿದೆ.

ಇನ್ನು, ರವೀಂದ್ರನಗರದ ನಿವಾಸಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹಾಗೂ ನಗರ ಮಹಾಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷ ಸೋಮೇಶ್ವರ ನಾಯ್ಕ ಅವರೂ ಮರ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶಾಲಾ ಆವರಣದಲ್ಲಿರುವ ಮರದಿಂದ ವಿದ್ಯಾರ್ಥಿಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದ್ದರೂ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಮಕ್ಕಳ ಜೀವಕ್ಕೆ ಅಪಾಯ ಎದುರಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು, ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ಮರ ತೆರವುಗೊಳಿಸಬೇಕು. ಸಂಬಂಧಪಟ್ಟ ಅರಣ್ಯ ಇಲಾಖೆ ಇನ್ನಾದರೂ ನಿರ್ಲಕ್ಷ್ಯ ಬಿಟ್ಟು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ.

 

 

 

Please Share: