ಕರಾವಳಿ ವಾಯ್ಸ್ ನ್ಯೂಸ್ 

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ನಡುಚಿಟ್ಟೆಯಲ್ಲಿ ಯಾವುದೇ ಪರವಾನಗಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದೆ ಪಟಾಕಿ ತಯಾರಿಕೆ ನಡೆಸುತ್ತಿದ್ದ ಆರೋಪದಡಿ ಓರ್ವ ವ್ಯಾಪಾರಿಯ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad

ನಡುಚಿಟ್ಟೆ ನಿವಾಸಿ ಇಸ್ಮಾಯಿಲ್ ಯೂಸುಫ್ ಸಾಬ್ (56) ಎಂಬಾತ ತನ್ನ ಮನೆಯ ಹಿಂಭಾಗದ ಶೆಡ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಿ ಪಟಾಕಿ ತಯಾರಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತನು ಸ್ಥಳದಿಂದ ಪರಾರಿಯಾಗಿದ್ದಾನೆ.

ದಾಳಿಯ ಸಂದರ್ಭದಲ್ಲಿ ಸ್ಥಳದಿಂದ ಪಟಾಕಿ ಇರುವ ಡ್ರಮ್, ಕಾರ್ಡ್‌ಬೋರ್ಡ್, ಪಟಾಕಿ ತುಂಬಿದ ಚೀಲಗಳು, 9.3 ಕೆ.ಜಿ. ಗಂಧಕದ ಪುಡಿ, 600 ಗ್ರಾಂ ಇದ್ದಿಲಿನ ಪುಡಿ, ಪಟಾಕಿ ಹಚ್ಚಲು ಬಳಸುವ ಬತ್ತಿಗಳು ಹಾಗೂ ಪಟಾಕಿ ಸುತ್ತಲು ಬಳಸುವ ಏಳು ಸುತ್ತಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರು ಸರ್ಕಾರದ ಪರವಾಗಿ ನೀಡಿದ ದೂರಿನ ಮೇರೆಗೆ ಅಪರಾಧ ಸಂಖ್ಯೆ 140/2026 ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಸ್ಫೋಟಕ ಅಧಿನಿಯಮ, 1884ರ ಕಲಂ 9(2) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 288 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಆರೋಪಿಯ ಪತ್ತೆ ಹಾಗೂ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

 

 

 

Please Share: