ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ತಾಲೂಕಿನ ಗೋಕರ್ಣದ ದುಬ್ಬಣಶಶಿ ಬೀಚ್‌ನಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮುಳುಗಿದ ಐವರು ಪ್ರವಾಸಿಗರ ಪೈಕಿ ಇಬ್ಬರು ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಇಬ್ಬರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.

Banner Ad

ಬೆಂಗಳೂರಿನ ಬೆಳ್ಳಂದೂರಿನ ಆಲೋರಿಕಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಶನಿವಾರ ಸಂಜೆ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿ, ದುಬ್ಬಣಶಶಿ ಬೀಚ್‌ನ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿತ್ತು. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ತಂಡದ ಸದಸ್ಯರು ಸಮುದ್ರಕ್ಕೆ ಇಳಿದಿದ್ದಾಗ ಐವರು ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.

ತಕ್ಷಣ ರೆಸಾರ್ಟ್‌ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿ ನಾಲ್ವರನ್ನು ದಡಕ್ಕೆ ಕರೆತಂದಿದ್ದಾರೆ. ಈ ಪೈಕಿ ಶೋಭಾ ದಾಸ್ (22) ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟರೆ, ತಂಡದ ಟೀಮ್ ಲೀಡರ್ ಮಹಮದ್ ಅಕ್ರಮ್ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮುರುಡೇಶ್ವರ ಸಮೀಪ ಮೃತಪಟ್ಟಿದ್ದಾರೆ.

ನಿಶಾಂತ್ ಡಿ.ವಿ. (26) ಹಾಗೂ ಮಹಮದ್ ಖಾಸಿಂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನ ಕಲ್ಯಾಣನಗರದ ವಿಶ್ವ ಎ.ಕೆ. (24) ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಆಗಮಿಸಿದ ಬಳಿಕ ದೂರು ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

 

Please Share: