ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ, ಜೂ. 11: ತಾಲೂಕಿನ ತ್ಯಾಗಲಿ ಗ್ರಾಮದ ಮಾಲ್ಕಿ ಸರ್ವೆ ನಂ.160ರಲ್ಲಿ ಸುಮಾರು ಎರಡು ವರ್ಷ ಪ್ರಾಯದ ಹೆಣ್ಣು ಕಡವೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.

ಮಾಹಿತಿ ಪಡೆದ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ನಿಂಗಾಣಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ್ ಎಲ್. ನಾಯ್ಕ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಡವೆ ಸಾವಿನ ಕಾರಣ ಪತ್ತೆಹಚ್ಚುವ ಉದ್ದೇಶದಿಂದ ದಾಂಡೇಲಿಯ ವನ್ಯಜೀವಿ ರಕ್ಷಣಾ ಮತ್ತು ತರಬೇತಿ ಕೇಂದ್ರದ ವಿಧಿವಿಜ್ಞಾನ ತಜ್ಞರು ಹಾಗೂ ಕೆಟಿಆರ್ ವಿಭಾಗದ ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಮೃತ ಪ್ರಾಣಿಯ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ನೆರವೇರಿಸಿದರು. ಈ ವೇಳೆ ಕಾನಸೂರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೇಕರ್, ತ್ಯಾಗಲಿ ಗಸ್ತಿನ ಅರಣ್ಯ ಪಾಲಕ ರೋಹಿತ್ ನಾಯ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಕಡವೆ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

 

 

 

Please Share: