ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಪ್ರತಿದಿನದಂತೆ ಕುಟುಂಬದ ಹೊಟ್ಟೆಪಾಡಿಗಾಗಿ ಮುಂಜಾನೆ ಸಮುದ್ರಕ್ಕಿಳಿದ ಮೀನುಗಾರನೊಬ್ಬ ಮತ್ತೆ ಮನೆಗೆ ಮರಳಲಿಲ್ಲ. ಅಂಕೋಲಾ ತಾಲೂಕಿನ ಹಾರವಾಡ ಗಾಬಿತವಾಡ ಸಮೀಪ ಅರಬ್ಬಿ ಸಮುದ್ರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ದುರಂತದಲ್ಲಿ ಗಾಬಿತವಾಡದ ನಿವಾಸಿ ಸಹದೇವ್ ಮೆತಾ ಮೃತಪಟ್ಟಿದ್ದಾರೆ.
ಮೀನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಹದೇವ್, ಎಂದಿನಂತೆ ಬೆಳಗಿನ ಜಾವ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು. ಆದರೆ ಆ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಅವರ ದೋಣಿ ಏಕಾಏಕಿ ಮುಳುಗಿದೆ ಎಂದು ತಿಳಿದುಬಂದಿದೆ. ಜೀವದ ಹಂಗು ತೊರೆದು ಸಮೀಪದಲ್ಲಿದ್ದ ಇತರ ಮೀನುಗಾರರು ರಕ್ಷಣೆಗೆ ಧಾವಿಸಿ ಅವರನ್ನು ಉಳಿಸಲು ಹರಸಾಹಸ ಪಟ್ಟರೂ, ವಿಧಿಯಾಟದ ಮುಂದೆ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ.
ಕುಟುಂಬದ ಆಸರೆ ಆಗಿದ್ದ ಸಹದೇವ್ ಅವರ ಅಕಾಲಿಕ ನಿಧನದಿಂದ ಗಾಬಿತವಾಡದಲ್ಲಿ ಶೋಕದ ಛಾಯೆ ಆವರಿಸಿದೆ. ಮನೆಗೆ ಮರಳಬೇಕಿದ್ದ ವ್ಯಕ್ತಿಯ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರ ಕಣ್ಣಲ್ಲೂ ನೀರು ತರಿಸಿದೆ.
ಸಮುದ್ರವನ್ನೇ ಜೀವನಾಧಾರವಾಗಿಸಿಕೊಂಡಿರುವ ಮೀನುಗಾರರ ಬದುಕು ಎಷ್ಟು ಅಪಾಯಗಳಿಂದ ಕೂಡಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಡಿಯೋ ನೋಡಿ
