ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66ರ ದೊಡ್ಡ ಬಲಸೆ ಕ್ರಾಸ್ ಬಳಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಸುಮಾರು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಭಟ್ಕಳ ತಾಲ್ಲೂಕಿನ ಕಟಗಾರಕೊಪ್ಪ ಹಲ್ಲಂದಿ ನಿವಾಸಿ ನಾಗರಾಜ ಗಣಪತಿ ಗೊಂಡ (29) ಎಂದು ಗುರುತಿಸಲಾಗಿದೆ. ಖಾಸಗಿ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ, ಮತ್ತೋರ್ವ ಆರೋಪಿಯೊಂದಿಗೆ ಸೇರಿ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.
ಜುಲೈ 20ರ ರಾತ್ರಿ ಪಿರ್ಯಾದಿದಾರರು ರಾಷ್ಟ್ರೀಯ ಹೆದ್ದಾರಿ-66ರ ಮೂಲಕ ಮನೆಗೆ ತೆರಳುತ್ತಿದ್ದ ವೇಳೆ ದೊಡ್ಡ ಬಲಸೆ ಕ್ರಾಸ್ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 22 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ತಕ್ಷಣ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಿದ್ದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಬೈಕ್ ಸೇರಿದಂತೆ ಒಟ್ಟು ಸುಮಾರು ₹3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಸಿಪಿಐ ಜಗಧೀಶ ಹಂಚನಾಳ ಅವರ ನೇತೃತ್ವದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
