ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ತೆರೆದ ಚರಂಡಿಯಲ್ಲಿ ಜಾನುವಾರುಗಳು ಸಿಲುಕುವ ಘಟನೆಗಳು ಕಾರವಾರದಲ್ಲಿ ಮರುಕಳಿಸುತ್ತಿದ್ದು, ಮಂಗಳವಾರ ಪೊಲೀಸ್ ಕಲ್ಯಾಣ ಮಂಟಪದ ಬಳಿಯ ಚರಂಡಿಯಲ್ಲಿ ಸಿಲುಕಿದ್ದ ಎಮ್ಮೆಯನ್ನು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಿಸಿದ್ದಾರೆ.

Banner Ad

ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕಿರಿದಾದ ಚರಂಡಿಯಲ್ಲಿ ಸಿಲುಕಿದ ಎಮ್ಮೆ ಹೊರಬರಲಾಗದೆ ನರಳಾಡುತ್ತಿತ್ತು. ಪಕ್ಕದ ಪೊಲೀಸ್ ವಸತಿಗೃಹದಲ್ಲಿದ್ದ ಎಎಸ್‌ಐ ಮಂಜುನಾಥ್ ಅವರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ನೇತೃತ್ವದ ಅಗ್ನಿಶಾಮಕ ತಂಡ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿತು.

ಮತ್ತೆ ಮತ್ತೆ ಇದೇ ಸಂಕಟ!

ಕಾರವಾರ ನಗರ ವ್ಯಾಪ್ತಿಯಲ್ಲಿ ತೆರೆದ ಚರಂಡಿಗಳು ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಇತ್ತೀಚೆಗಷ್ಟೇ ಹಬ್ಬುವಾಡ ಬಳಿಯೂ ಚರಂಡಿಗೆ ಬಿದ್ದ ಎಮ್ಮೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು. ಒಂದೆಡೆ ಜಾನುವಾರುಗಳು ಚರಂಡಿಗೆ ಬಿದ್ದು ಸಂಕಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಅವುಗಳನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಪದೇಪದೇ ಕಾರ್ಯಾಚರಣೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತೆರೆದ ಚರಂಡಿಗಳಿಂದ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಚರಂಡಿಗಳನ್ನು ಸುರಕ್ಷಿತಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಹಾಗೂ ಸಿಬ್ಬಂದಿಗಳಾದ ರವಿರಾಜ ಭೂತೆ, ಸುನೀಲ್ ನಾಯ್ಕ, ಶ್ರೀಕಾಂತ ಮತ್ತು ಸಪ್ನಿಲ್ ಪೇಡ್ನೇಕರ ಪಾಲ್ಗೊಂಡಿದ್ದರು. ಎಮ್ಮೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

Please Share: