ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಮನುಷ್ಯ ಮತ್ತು ಮೂಕಪ್ರಾಣಿಗಳ ನಡುವಿನ ಆತ್ಮೀಯ ಬಾಂಧವ್ಯಕ್ಕೆ ಅಂಕೋಲಾದಲ್ಲಿ ಕಂಡುಬಂದಿರುವ ಅಪರೂಪದ ದೃಶ್ಯವೊಂದು ಸಾಕ್ಷಿಯಾಗಿದೆ. ಪಟ್ಟಣದ ಶಾರದಾ ಶೆಣೈ ಅವರ ಅಂಗಡಿಗೆ ಕಳೆದ ನಾಲ್ಕು ವರ್ಷಗಳಿಂದ ಹಸುವೊಂದು ಪ್ರತಿದಿನ ಭೇಟಿ ನೀಡುತ್ತಿದ್ದು, ಐಸ್‌ಕ್ರೀಂ ಹಾಗೂ ಬಿಸ್ಕತ್ ತಿಂದು, ಅಜ್ಜಿಗೆ ಪ್ರೀತಿಯಿಂದ ಮುತ್ತಿಟ್ಟು ತೆರಳುತ್ತದೆ.,

Banner Ad

ಪ್ರಾಣಿಗಳೆಂದರೆ ಅಪಾರ ಪ್ರೀತಿ ಹೊಂದಿರುವ ಶಾರದಾ ಶೆಣೈ ಅವರು ತಮ್ಮ ಅಂಗಡಿಗೆ ಬರುವ ಮೂಕಪ್ರಾಣಿಗಳಿಗೆಂದು ಬಿಸ್ಕತ್ ಹಾಗೂ ಇತರ ತಿನಿಸುಗಳನ್ನು ಇಟ್ಟುಕೊಂಡಿರುತ್ತಾರೆ. ಹಸು ಅಂಗಡಿಗೆ ಬಂದಾಗ ಆಹಾರ ನೀಡುವುದಲ್ಲದೆ, ಅದರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾರೆ.

‘ಪಪ್ಪಿ ಕೊಡು’ ಎಂದರೆ ಮುತ್ತು!

ಶಾರದಾ ಅಜ್ಜಿ ಮಾತನಾಡುವ ಮಾತುಗಳನ್ನು ಹಸು ಅರ್ಥಮಾಡಿಕೊಳ್ಳುತ್ತದೆ ಎನ್ನುವುದು ಈ ಬಾಂಧವ್ಯದ ವಿಶೇಷತೆ. ‘ಪಪ್ಪಿ ಕೊಡು’ ಎಂದು ಹೇಳುತ್ತಿದ್ದಂತೆ ಹಸು ಮುಖವನ್ನು ಅಜ್ಜಿಯ ಬಳಿಗೆ ತಂದು ಮುದ್ದಿಸುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನವೂ ಹಸು ಅಂಗಡಿಗೆ ಬರುತ್ತಿದ್ದರೂ, ಅದು ಯಾರ ಮನೆಯ ಹಸು ಎಂಬುದು ಮಾತ್ರ ತಿಳಿದಿಲ್ಲ ಎಂದು ಶಾರದಾ ಶೆಣೈ ತಿಳಿಸಿದ್ದಾರೆ.

ಹಸುವಿನ ಮೇಲಿನ ಪ್ರೀತಿಯಷ್ಟೇ ಅಲ್ಲದೆ, ಶಾರದಾ ಅವರು ತಮ್ಮ ಮನೆಯಲ್ಲಿ 5–6 ಬೆಕ್ಕುಗಳನ್ನೂ ಸಾಕುತ್ತಿದ್ದಾರೆ. ಅವುಗಳ ಆಹಾರಕ್ಕಾಗಿ ಪ್ರತಿದಿನ ಸುಮಾರು ₹500ರಿಂದ ₹600ರವರೆಗೆ ಖರ್ಚು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಲಹರಿ ಮಾಧ್ಯಮದಲ್ಲಿ ವೈರಲ್

ಶಾರದಾ ಅಜ್ಜಿ ಮತ್ತು ಹಸುವಿನ ನಡುವಿನ ಈ ಅಪರೂಪದ ಆತ್ಮೀಯತೆಯ ವಿಡಿಯೊವನ್ನು ‘ಲಹರಿ ಮಾಧ್ಯಮ’ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವಿಡಿಯೊ ವೈರಲ್ ಆಗಿದೆ. ಪ್ರಾಣಿಪ್ರಿಯರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪ್ರೀತಿಯಿಂದ ನೀಡಿದ ಒಂದು ತುತ್ತಿಗೆ ಮೂಕಪ್ರಾಣಿಯೂ ತನ್ನದೇ ರೀತಿಯಲ್ಲಿ ಪ್ರೀತಿ ಮರಳಿಸುತ್ತದೆ ಎಂಬುದನ್ನು ಅಜ್ಜಿ ಮತ್ತು ಹಸುವಿನ ಈ ಅಪರೂಪದ ಬಾಂಧವ್ಯ ಸಾರುತ್ತಿದೆ.

 

Please Share: