ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಸಾರ್ವಜನಿಕ ಸುವ್ಯವಸ್ಥೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಡಿಜೆ ವ್ಯವಸ್ಥೆ, ಬೇಸ್ ಬೂಸ್ಟರ್, ಮೊಬೈಲ್ ಡಿಜೆ ವಾಹನ ಹಾಗೂ 75 ಡೆಸಿಬೆಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಆದೇಶಿಸಿದ್ದಾರೆ.

ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮ) ನಿಯಮಗಳು, 2000 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
ವಸತಿ ಪ್ರದೇಶಗಳು, ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯ ಸೈಲೆಂಟ್ ಝೋನ್‌ಗಳು, ಇಳಿವು ರಸ್ತೆ, ಸಂಚಾರ ದಟ್ಟಣೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿಯೂ ಡಿಜೆ ಮತ್ತು ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ಡಿಜೆ ಹಾಗೂ ಹೆಚ್ಚಿನ ಶಬ್ದ ಸಾಧನಗಳ ಬಳಕೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆಗಳಿಗೆ ಅತ್ಯವಶ್ಯವಿದ್ದಲ್ಲಿ ಮಾತ್ರ ಪೊಲೀಸ್ ಇಲಾಖೆಯಿಂದ ಪೂರ್ವ ಲಿಖಿತ ಷರತ್ತುಬದ್ಧ ಅನುಮತಿ ಪಡೆಯಬೇಕು. ಶಬ್ದ ನಿಯಮಗಳ ಪಾಲನೆ ಕುರಿತು ಆಯೋಜಕರು ಲಿಖಿತ ಮುಚ್ಚಳಿಕೆ ನೀಡುವುದು ಕಡ್ಡಾಯವಾಗಿದೆ.
ಆದೇಶ ಉಲ್ಲಂಘನೆಯಾದಲ್ಲಿ ಕಾರ್ಯಕ್ರಮದ ಆಯೋಜಕರನ್ನೇ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.


