ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಾಳಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎರಡು ಮರಳು ದೋಣಿಗಳನ್ನು ವಶಕ್ಕೆ ಪಡೆದು, ಅಕ್ರಮ ಮರಳನ್ನು ಜಪ್ತಿ ಮಾಡಿದ ಘಟನೆ ತಾಲೂಕಿನ ಹೊಟೆಗಾಳಿ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೋಣಿಗಳಲ್ಲಿದ್ದ ಸುಮಾರು 10 ಮೀ. ಹಾಗೂ 6 ಮೀ. ಮರಳನ್ನು ಗ್ರಾಮಸ್ಥರು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಮರಳು ತೆಗೆಯುತ್ತಿದ್ದವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ವಶಪಡಿಸಿಕೊಂಡ ದೋಣಿಗಳು ಕಣಸಗಿರಿ ಮೂಲದ ಸಹೋದರರಿಬ್ಬರಿಗೆ ಸೇರಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟನೆ ಮಾಹಿತಿ ತಿಳಿದು ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.


