ಗಡಿ ಭದ್ರತಾ ಪಡೆಯ ಮಾಜಿ ಯೋಧ, ಈಗ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್; ರಾಷ್ಟ್ರೀಯ ಮಟ್ಟದಲ್ಲಿ ಸುದರ್ಶನ ತಾಂಡೇಲ ಸಾಧನೆ

ಕರಾವಳಿ ವಾಯ್ಸ್ ನ್ಯೂಸ್ 

Banner Ad

ಕಾರವಾರ: ದೇಶದ ಗಡಿ ಕಾಯ್ದ ಕೈಗಳು, ಈಗ ಕಡಲಿನ ಅಲೆಗಳನ್ನೂ ಗೆದ್ದು ಈಜಿನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿವೆ. ಕಾರವಾರದ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಸುದರ್ಶನ ಪಿ. ತಾಂಡೇಲ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅಪೂರ್ವ ಸಾಧನೆ ಮಾಡಿ ಉತ್ತರ ಕನ್ನಡ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಎಲಿವೇಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅಕ್ಟೋಬರ್ 7ರಂದು ನಡೆದ ‘5ನೇ ವೆಟರನ್ಸ್ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ನ್ಯಾಷನಲ್ ಚಾಂಪಿಯನ್‌ಶಿಪ್–2026’ರಲ್ಲಿ ಸುದರ್ಶನ ನಾಲ್ಕು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 50 ಮೀಟರ್ ಫ್ರೀಸ್ಟೈಲ್, 100 ಮೀಟರ್ ಫ್ರೀಸ್ಟೈಲ್, 50 ಮೀಟರ್ ಬ್ಯಾಕ್‌ಸ್ಟ್ರೋಕ್ ಹಾಗೂ 100 ಮೀಟರ್ ಬ್ಯಾಕ್‌ಸ್ಟ್ರೋಕ್ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ತಮ್ಮ ಈಜು ಸಾಮರ್ಥ್ಯವನ್ನು ರಾಷ್ಟ್ರಮಟ್ಟದಲ್ಲಿ ಸಾಬೀತುಪಡಿಸಿದ್ದಾರೆ.

ಕಡಲನ್ನೇ ಬದುಕಾಗಿಸಿಕೊಂಡವರು

ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುದರ್ಶನ ಅವರು ಮೂಲತಃ ಚಿತ್ತಾಕುಲದವರು. ಪ್ರಸ್ತುತ ಕಳಸವಾಡದಲ್ಲಿ ವಾಸವಾಗಿದ್ದಾರೆ. ಗಡಿ ಭದ್ರತಾ ಪಡೆಯ ಮಾಜಿ ಯೋಧರಾಗಿರುವ ಅವರು, ನಿವೃತ್ತಿಯ ಬಳಿಕವೂ ದೇಶಸೇವೆಯಿಂದ ಹಿಂದೆ ಸರಿಯದೆ ಕಾರವಾರದ ಕರಾವಳಿ ಕಾವಲುಪಡೆಯಲ್ಲಿ ಬೋಟ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೇಶದ ಭದ್ರತೆಯ ಹೊಣೆಗಾರಿಕೆಯ ನಡುವೆ ಕ್ರೀಡೆಯ ಮೇಲಿನ ಆಸಕ್ತಿಯನ್ನೂ ಉಳಿಸಿಕೊಂಡಿರುವ ಅವರು, ಶಿಸ್ತು, ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ. ಕಡಲೇ ತಮ್ಮ ಆಸ್ತಿ, ಕಡಲ ಸೇವೆಯೇ ತಮ್ಮ ಬದುಕು ಎಂಬಂತೆ ಕರಾವಳಿಯ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸುದರ್ಶನ ಅವರಿಗೆ ಈಜು ಕ್ರೀಡೆಯೂ ಬದುಕಿನ ಅವಿಭಾಜ್ಯ ಅಂಗವಾಗಿದೆ.

ಮುಕ್ತ ಸಮುದ್ರ ಈಜಿನಲ್ಲಿ ಸತತ ಆರು ಬಾರಿ ಪ್ರಥಮ

ಸುದರ್ಶನ ಅವರ ಪ್ರತಿಭೆ ಈಜುಕೊಳಕ್ಕೆ ಮಾತ್ರ ಸೀಮಿತವಾಗಿಲ್ಲ. ಕಡಲ ಅಲೆಗಳ ನಡುವೆಯೂ ಈಜುವ ಪರಿಣತಿ ಹೊಂದಿರುವ ಅವರು, ಕದಂಬ ನೌಕಾನೆಲೆಯ ವ್ಯಾಪ್ತಿಯ ಗೋವಾ ಬಾಗಾ ಕಡಲತೀರದಲ್ಲಿ ನೌಕಾದಿನಾಚರಣೆ ಹಾಗೂ ವಿಜಯ ದಿವಸದ ಅಂಗವಾಗಿ ಆಯೋಜಿಸಲಾಗುತ್ತಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ಮುಕ್ತ ಸಮುದ್ರ ಈಜು ಸ್ಪರ್ಧೆಯಲ್ಲಿ ಸತತ ಆರು ಬಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಮುದ್ರದ ಸವಾಲುಗಳ ನಡುವೆಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವುದು ಅವರ ಈಜು ಕೌಶಲಕ್ಕೆ ಸಾಕ್ಷಿಯಾಗಿದೆ.

ಸಾವಿರಾರು ಮಂದಿಗೆ ಈಜು ಕಲಿಸಿದ ಗುರು

ಸ್ಪರ್ಧೆಗಳಲ್ಲಿ ಪದಕ ಗೆಲ್ಲುವುದಷ್ಟೇ ಅಲ್ಲದೆ, ತಮ್ಮ ಅನುಭವವನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುವುದರಲ್ಲಿಯೂ ಸುದರ್ಶನ ಆಸಕ್ತಿ ಹೊಂದಿದ್ದಾರೆ. ಬಿಡುವಿನ ವೇಳೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಪುಟಾಣಿ ಮಕ್ಕಳಿಗೆ ಈಜು ತರಬೇತಿ ನೀಡುತ್ತಿದ್ದಾರೆ. ಕಾರವಾರ ನಗರಸಭೆಯ ಈಜುಕೊಳದಲ್ಲಿ ಹಲವು ವರ್ಷಗಳಿಂದ ಸಾವಿರಾರು ಜನರಿಗೆ ಈಜು ಕಲಿಸಿರುವ ಅವರು, ಮಕ್ಕಳ ಅಚ್ಚುಮೆಚ್ಚಿನ ತರಬೇತುದಾರರಾಗಿದ್ದಾರೆ.

ಒಂದೆಡೆ ದೇಶದ ಕರಾವಳಿಯ ರಕ್ಷಣೆಯ ಹೊಣೆ, ಮತ್ತೊಂದೆಡೆ ಈಜು ಕ್ರೀಡೆಯಲ್ಲಿ ಪದಕಗಳ ಬೇಟೆ, ಜೊತೆಗೆ ಹೊಸ ತಲೆಮಾರಿಗೆ ಈಜು ಕಲಿಸುವ ಸೇವೆ. ಹೀಗೆ ದೇಶಸೇವೆ, ಕ್ರೀಡಾಸಾಧನೆ ಮತ್ತು ತರಬೇತಿಯ ಮೂಲಕ ಗುರುತಿಸಿಕೊಂಡಿರುವ ಸುದರ್ಶನ ತಾಂಡೇಲ ಅವರ ನಾಲ್ಕು ಚಿನ್ನದ ಪದಕಗಳ ಸಾಧನೆ ಕರಾವಳಿಯ ಕ್ರೀಡಾಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

 

 

Please Share: