ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕ್ರೀಡಾ ಪ್ರತಿಭೆಗೆ ಸಿಕ್ಕ ಜಯ, ಪರಿಶ್ರಮಕ್ಕೆ ಒಲಿದ ಪದಕ! ಚಿತ್ತಾಕುಲದ ಶಿವಾಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಇತರ ವಿದ್ಯಾರ್ಥಿಗಳೂ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Banner Ad

ಕುಮಟಾದ ನೆಲ್ಲಿಕೇರಿಯ ಸರಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ನಾಗಶ್ರೀ ನಾಯ್ಕ ಸಾಧನೆಯ ಸರಮಾಲೆಯನ್ನೇ ಮೂಡಿಸಿದ್ದಾಳೆ.

400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ, 4×100 ಮೀ. ಮತ್ತು 4×400 ಮೀ. ರಿಲೆಯಲ್ಲಿ ಬೆಳ್ಳಿ ಹಾಗೂ 400 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾಳೆ. ಖೋ-ಖೋ ಸ್ಪರ್ಧೆಯಲ್ಲಿ ಕಮಲಾ ವಡ್ಡರ ಕೂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇನ್ನು ಚೈತ್ರಾ ಯು. ನಾಯ್ಕ 3000 ಮೀ. ನಡಿಗೆಯಲ್ಲಿ ಕಂಚು ಹಾಗೂ 4×100 ಮೀ. ಮತ್ತು 4×400 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾಳೆ. ಪ್ರತಿಕಾ ಚಂಡೇಕರ 4×400 ಮೀ. ರಿಲೆಯಲ್ಲಿ, ಪ್ರಸನ್ನ ಕಲ್ಗುಟ್ಕರ 4×100 ಮೀ. ರಿಲೆಯಲ್ಲಿ ಬೆಳ್ಳಿ ಪದಕ ಪಡೆದು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ವೈಯಕ್ತಿಕ ಸ್ಪರ್ಧೆಗಳಿಂದ ರಿಲೆ ಓಟದವರೆಗೆ ವಿದ್ಯಾರ್ಥಿಗಳು ತೋರಿದ ಪ್ರದರ್ಶನ ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತಷ್ಟು ಮೆರುಗು ನೀಡಿದೆ. ದೈಹಿಕ ಶಿಕ್ಷಣ ಉಪನ್ಯಾಸಕ ಅಣ್ಣಪ್ಪ ಆರ್. ನಾಯ್ಕ ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಯಶಸ್ಸು ಗಳಿಸುವಂತೆ ಹಾರೈಸಿದ್ದಾರೆ.

 

Please Share: