ಕರಾವಳಿ ವಾಯ್ಸ್ ನ್ಯೂಸ್ 

ಜೋಯಿಡಾ: ತಾಲೂಕಿನ ಪ್ರಧಾನಿ–ಕೊಡ್ಲಿ ಮಾರ್ಗದ ಪ್ರಧಾನಿ ಸಮೀಪ ಗುರುವಾರ ನಸುಕಿನ ವೇಳೆ ರಸ್ತೆ ಬದಿಯಲ್ಲಿ ಕರಡಿಯೊಂದು ಕಾಣಿಸಿಕೊಂಡ ಘಟನೆ ನಡೆದಿದೆ. ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಈ ದೃಶ್ಯ ಕಂಡುಬಂದಿದೆ ಎಂದು ತಿಳಿದುಬಂದಿದೆ.

Banner Ad

ಅದೇ ಸಮಯದಲ್ಲಿ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರನೊಬ್ಬ ತನ್ನ ವಾಹನ ನಿಲ್ಲಿಸಿ, ಕರಡಿಯ ಸಂಚಾರವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಕೆಲಕಾಲ ರಸ್ತೆ ಬದಿಯಲ್ಲೇ ತಿರುಗಾಡಿದ ಕರಡಿ ಬಳಿಕ ಅರಣ್ಯದೊಳಗೆ ತೆರಳಿದೆ ಎನ್ನಲಾಗಿದೆ.

ದಟ್ಟ ಅರಣ್ಯ ಪ್ರದೇಶಗಳಿಂದ ಆವರಿಸಲ್ಪಟ್ಟಿರುವ ಜೋಯಿಡಾ ತಾಲೂಕಿನಲ್ಲಿ ಹುಲಿ, ಆನೆ, ಕರಡಿ, ಚಿರತೆ ಸೇರಿದಂತೆ ವಿವಿಧ ವನ್ಯಜೀವಿಗಳ ಓಡಾಟ ಸಾಮಾನ್ಯವಾಗಿದೆ. ವಿಶೇಷವಾಗಿ ಪ್ರಧಾನಿ ಭಾಗದ ಸುತ್ತಮುತ್ತ ಅರಣ್ಯ ಪ್ರದೇಶ ಹಾಗೂ ಹೋಂಸ್ಟೇಗಳು ಹೆಚ್ಚಿರುವುದರಿಂದ ವನ್ಯಜೀವಿಗಳ ದರ್ಶನವಾಗುತ್ತಿರುವುದು ಸ್ಥಳೀಯರು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಆಹಾರ ಹುಡುಕುತ್ತ ಮಾನವ ವಸತಿ ಪ್ರದೇಶಗಳತ್ತ ವನ್ಯಪ್ರಾಣಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ರಾತ್ರಿ ಹಾಗೂ ನಸುಕಿನ ವೇಳೆ ಸಂಚರಿಸುವವರು ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ.

 

 

Please Share: