ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕುಟುಂಬದ ಬದುಕಿನ ಬಂಡಿಯನ್ನು ಎಳೆಯಲು ಪ್ರತಿದಿನದಂತೆ ರಿಕ್ಷಾ ಹಿಡಿದು ಹೊರಟಿದ್ದ ಚಾಲಕನೊಬ್ಬ, ಸಂಜೆ ವೇಳೆಗೆ ಜೀವಂತವಾಗಿ ಮನೆಗೆ ಮರಳಲೇ ಇಲ್ಲ. ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಡೆದ ಭೀಕರ ಅಪಘಾತ ಒಂದು ಕುಟುಂಬದ ಆಸರೆಯನ್ನೇ ಕಸಿದುಕೊಂಡಿದೆ.

ಕೊಡಿಬಾಗ ಅಳ್ವೇವಾಡ ನಿವಾಸಿ ಪ್ರಮೋದ್ ಜೈವಂತ ಪೆಡ್ನೆಕರ್ ಮೃತಪಟ್ಟ ದುರ್ದೈವಿ. ಗುರುವಾರ ಸಂಜೆ ಮಾಜಾಳಿ ಸಮೀಪದ ಗಾಂವಗೇರಿ ರಾಮನಾಥ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಪೊಲೀಸರ ಮಾಹಿತಿ ಪ್ರಕಾರ, ಪ್ರಮೋದ್ ಅವರು ಕೆಎ30ಎ2631 ಸಂಖ್ಯೆಯ ಪ್ರಯಾಣಿಕರ ಆಟೋರಿಕ್ಷಾವನ್ನು ಕಾರವಾರ ಕಡೆಯಿಂದ ಚಲಾಯಿಸಿಕೊಂಡು ಬಂದು, ಮಾಜಾಳಿ ಕಡೆಗೆ ತಿರುಗಲು ಸಿಗ್ನಲ್ ನೀಡಿ ರಸ್ತೆ ತಿರುಗಿಸುತ್ತಿದ್ದ ವೇಳೆ, ಗೋವಾ ಕಡೆಯಿಂದ ಅತೀ ವೇಗದಲ್ಲಿ ಬಂದ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಬ್ರಿಜಾ ಕಾರು (TN 66 AV 9897) ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಪಲ್ಟಿಯಾಗಿದ್ದು, ಪ್ರಮೋದ್ ಅವರ ಕೈ, ಕಾಲು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ಜ್ಯೋತಿ ಗೋವೆಕರ ಅವರಿಗೂ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಪ್ರಮೋದ್ ಅವರು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಅಪಘಾತದ ಬಳಿಕ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಸ್ ನಿಲ್ದಾಣ ಕಟ್ಟಡಕ್ಕೂ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದು ಘಟನೆಯ ಭೀಕರತೆಯನ್ನು ತೋರಿಸಿತು. ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಲು ಧಾವಿಸಿದ ದೃಶ್ಯ ಮನಕಲಕುವಂತಿತ್ತು.

ಮೃತ ಪ್ರಮೋದ್ ಅವರು ಕುಟುಂಬದ ಪ್ರಮುಖ ಆಧಾರವಾಗಿದ್ದರು ಎನ್ನಲಾಗಿದ್ದು, ಅವರ ಅಕಾಲಿಕ ನಿಧನದಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. “ಬೆಳಗ್ಗೆ ಕೆಲಸಕ್ಕೆ ಹೋದವನು ಸಂಜೆ ಶವವಾಗಿ ಬರುವುದು ಯಾರಿಗೂ ಬೇಡ” ಎಂದು ಸ್ಥಳೀಯರು ಕಣ್ಣೀರಿಟ್ಟರು.

ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಅಜಿತ್ ಎಸ್. ಸುಬ್ರಮಣಿಯನ್ ವಿರುದ್ಧ ತನಿಖೆ ಮುಂದುವರಿದಿದೆ.

 

 

 

 

 

 

 

Please Share: