ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಏಪ್ರಿಲ್ 9: ತಾಲೂಕಿನ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಡು ಹಂದಿ ಅಡ್ಡ ಬಂದ ಪರಿಣಾಮ ಸ್ಕೂಟಿ ಸವಾರನೊಬ್ಬ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.

Banner Ad

ಮೃತರನ್ನು ನಿವಳೆ ಗ್ರಾಮದ ನಾಗರಾಜ ಗೋವಿಂದ ಗೌಡ (25) ಎಂದು ಗುರುತಿಸಲಾಗಿದೆ. ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೂಪೇಶ್ ವೆಂಕು ಗೌಡ (36) ಅವರು ನೀಡಿದ ದೂರಿನ ಪ್ರಕಾರ, ಬುಧವಾರ ರಾತ್ರಿ ನಾಗರಾಜ ಅವರು ತಮ್ಮ ಬಾಬು ಮೋಟಾರ್ ಸ್ಕೂಟಿ (ಕೆಎ-30/ವೈ-0842)ಯಲ್ಲಿ ವೈಲವಾಡದಿಂದ ನಿವಳೆ ಕಡೆ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನೈತಿಸಾವರ ಪ್ರದೇಶದ ಬಳಿ ಅಕಸ್ಮಾತ್ ಕಾಡು ಹಂದಿ ರಸ್ತೆ ದಾಟಲು ಬಂದಿದ್ದು, ಅದನ್ನು ತಪ್ಪಿಸಲು ಸಾಧ್ಯವಾಗದೆ ಸ್ಕೂಟಿಯು ಹಂದಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.

ಅಪಘಾತದ ಪರಿಣಾಮ ನಾಗರಾಜ ಅವರು ರಸ್ತೆಗೆ ಬಿದ್ದು ಮೂಗಿನ ಭಾಗದಲ್ಲಿ ರಕ್ತಸ್ರಾವ ಹಾಗೂ ತಲೆಗೆ ಗಂಭೀರ ಒಳಪೆಟ್ಟು ಹೊಂದಿದ್ದಾರೆ. ತಕ್ಷಣ ಅವರನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 9ರಂದು ರಾತ್ರಿ 12.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

 

Please Share: