ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನಲ್ಲಿನ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಕೆಪಿಎಮ್‌ಇ ಸಮಿತಿಯ ಅಧಿಕಾರಿಗಳ ತಂಡ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿದ ಒಂದು ಕ್ಲಿನಿಕ್‌ನ್ನು ಮುಚ್ಚಿಸಿದ ಘಟನೆ ನಡೆದಿದೆ.

ಅಧಿಕಾರಿಗಳು ಮೊದಲು ಸಾಯಿ ಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕ್ಲಿನಿಕ್ ಆಯುಷ್ ಪದ್ಧತಿಯಲ್ಲಿ ಕೆಪಿಎಮ್‌ಇ ನೋಂದಣಿಯನ್ನು ಹೊಂದಿದ್ದು, ಇಲ್ಲಿ ಡಾ. ಪ್ರವೀಣಾ ಬಿ. ಮೊರೆ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ, ಮಾನ್ಯ ಪದವಿ ಪಡೆದ ವೈದ್ಯರು ಮಾತ್ರ ಕೆಪಿಎಮ್‌ಇ ನೋಂದಣಿ ಮಾಡಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಮತಿ ಇರುವುದಾಗಿ ತಿಳಿಸಿ, ಅನಧಿಕೃತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಬಾರದು ಎಂದು ನೋಟೀಸ್ ನೀಡಿ ಎಚ್ಚರಿಕೆ ನೀಡಿದರು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ನೋಂದಣಿಯನ್ನು ರದ್ದುಪಡಿಸಲಾಗುವುದು ಎಂದು ಸೂಚಿಸಲಾಯಿತು.

ನಂತರ ಲೋಕನಾಥ ಪೈಲ್ಸ್ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ, ಅಗತ್ಯವಾದ ಕೆಪಿಎಮ್‌ಇ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂತು. ಬಿಇಎಎಂಎಸ್ ಪದವಿ ಹೊಂದಿದ ಡಾ. ಕೃಷ್ಣ ಎಂಬ ವ್ಯಕ್ತಿ ಪೈಲ್ಸ್ ಚಿಕಿತ್ಸೆಯನ್ನು ನೀಡುತ್ತಿರುವುದು ಪತ್ತೆಯಾಯಿತು. ಅಲ್ಲದೆ, ಅಲೋಪತಿ ಔಷಧಿಗಳನ್ನು ಬಳಸುವುದು, ಅವಧಿ ಮೀರಿದ ಔಷಧಿಗಳ ಸಂಗ್ರಹ, ಹಾಗೂ ರಕ್ತದಿಂದ ಸೋಂಕಿತ ಕಾಟನ್ ಸ್ವಾಬ್‌ಗಳನ್ನು ಬಯೋ-ಮೆಡಿಕಲ್ ತ್ಯಾಜ್ಯ ನಿಯಮಗಳನ್ನು ಪಾಲಿಸದೆ ತೆರೆದ ಡಸ್ಟ್‌ಬಿನ್‌ನಲ್ಲಿ ಸಂಗ್ರಹಿಸಿರುವುದು ಗಮನಕ್ಕೆ ಬಂತು.

ಈ ಕುರಿತು ಅಧಿಕಾರಿಗಳು ಪ್ರಶ್ನಿಸಿದಾಗ, ಜೀವ ತ್ಯಾಜ್ಯವನ್ನು ಪಟ್ಟಣ ಪಂಚಾಯಿತಿ ವಾಹನಕ್ಕೆ ನೀಡಲಾಗುತ್ತದೆ ಎಂದು ಸಂಬಂಧಿತರು ತಿಳಿಸಿದ್ದಾರೆ. ಕೆಪಿಎಮ್‌ಇ ನೋಂದಣಿ ಬಗ್ಗೆ ಪ್ರಶ್ನಿಸಿದಾಗ, ಬಿಇಎಎಂಎಸ್ ಪದವೀಧರರು ನೋಂದಣಿ ಮಾಡಿಕೊಳ್ಳಬಾರದು ಎಂಬ ನ್ಯಾಯಾಲಯದ ಆದೇಶವಿದೆ ಎಂದು ಸ್ಪಷ್ಟನೆ ನೀಡಲಾಗಿದೆ.

ಇದಲ್ಲದೆ, ಬಯೋ-ಮೆಡಿಕಲ್ ವೇಸ್ಟ್ ನಿರ್ವಹಣೆ (BMW), ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಗ್ನಿಶಾಮಕ ಸುರಕ್ಷತಾ ನೋಂದಣಿಗಳೂ ಇಲ್ಲದಿರುವುದು ಪತ್ತೆಯಾಗಿದೆ. ಈ ಎಲ್ಲಾ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ, ಅಗತ್ಯ ನೋಂದಣಿಗಳು ಪೂರ್ಣಗೊಳ್ಳುವವರೆಗೆ ಕ್ಲಿನಿಕ್ ಅನ್ನು ತಕ್ಷಣದಿಂದಲೇ ಮುಚ್ಚಲು ಸೂಚಿಸಿದೆ.

ಈ ಕಾರ್ಯಾಚರಣೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ, ಡಾ. ಭರತ ಡಿ.ಟಿ., ಆರೋಗ್ಯ ಕ್ಷೇತ್ರಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ದಿನೇಶ್ ನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Please Share: