ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ, ಜೂ. 18: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

Banner Ad

ಮೃತನನ್ನು ಚಿತ್ತಾಕುಲಾದ ಸೀ-ಬರ್ಡ್ ಕಾಲೋನಿ ನಿವಾಸಿ ರಕ್ಷಿತ್ ಗಣಪತಿ ಹರಿಕಂತ್ರ (27) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ಸುಮಾರು 11.45ರ ವೇಳೆಗೆ ರಕ್ಷಿತ್ ಅವರು ತಮ್ಮ ಹಿರೋ ಎಕ್ಸ್‌ಟ್ರೀಮ್ ಬೈಕ್‌ನಲ್ಲಿ ಕಾರವಾರದಿಂದ ಸದಾಶಿವಗಡ ಟೋಲ್‌ನಾಕಾ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸದಾಶಿವಗಡದ ಲೋಟಸ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬೈಕ್‌ನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡ ರಕ್ಷಿತ್ ಅವರನ್ನು ಮೊದಲಿಗೆ ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಮ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 4.10ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಮೃತರ ತಂದೆ ಗಣಪತಿ ಗಾರು ಹರಿಕಂತ್ರ ನೀಡಿದ ದೂರಿನ ಆಧಾರದ ಮೇಲೆ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Please Share: