ಕರಾವಳಿ ವಾಯ್ಸ್ ನ್ಯೂಸ್ 

ಭಟ್ಕಳ: ನಗರದ ಗುಳ್ಳಿಸುರಂಗದ ಸಮೀಪ ಬುಧವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮೃತನನ್ನು ಗುಳ್ಳಿ ನಿವಾಸಿ ಮೊಹಮ್ಮದ್ ನಾಸಿರ್ ಶೇಖ್ ಹುಸೇನ್ (33) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೃತರು ಕಳೆದ 15 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇತ್ತೀಚಿನ 3–4 ವರ್ಷಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನ ಮನೆಯಲ್ಲಿ ಊಟ ಮುಗಿಸಿ ಹೊರಟ ಅವರು, ಕೊಂಕಣ ರೈಲ್ವೆ ಸುರಂಗದ ಬಳಿ ರೈಲ್ವೆ ಹಳಿಯ ಸಮೀಪ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಮಧ್ಯಾಹ್ನ 3.24ರ ಸುಮಾರಿಗೆ ಮುರ್ಡೇಶ್ವರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಅವರಿಗೆ ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕೈ-ಕಾಲುಗಳು ಹಾಗೂ ಎಡ ಕಣ್ಣಿಗೂ ಗಂಭೀರ ಗಾಯಗಳಾಗಿವೆ.

ಘಟನೆ ಬಳಿಕ ರೈಲ್ವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಈ ಕುರಿತು ಮೃತನ ಅಣ್ಣ ನಚೀಲ್ ಶೇಖ್ ಅವರು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

 

Please Share: