ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ತಾಲೂಕಿನ ಕಾನಗೋಡ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಕೆತ್ತನೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ದಾಳಿ ನಡೆಸಿ, 33.390 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ.

Banner Ad

ಬಂಧಿತ ಆರೋಪಿಯನ್ನು ಕಾನಗೋಡ ಗ್ರಾಮದ ಜನತಾ ಕಾಲೋನಿಯ ನಿವಾಸಿ ದಯಾನಂದ ನಾರಾಯಣ ನಾಯ್ಕ (48) ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಮಶಿಗದ್ದೆ ಗ್ರಾಮದ ಮಂಜುನಾಥ ಅಣ್ಣಪ್ಪ ದೇವಾಡಿಗ (47) ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.

ದಾಳಿಯ ವೇಳೆ ಆರೋಪಿಗಳ ವಶದಲ್ಲಿದ್ದ 33.390 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್‌ಕುಮಾರ್ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ಅರಣ್ಯಾಧಿಕಾರಿ ಭವ್ಯಾ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೆಕರ ಹಾಗೂ ಅರಣ್ಯ ವನಪಾಲಕರಾದ ರೋಹಿತ್ ಎಂ. ನಾಯ್ಕ, ಮಂಜುನಾಥ ಜಹಗೀರದಾರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

 

Please Share: