ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ, ಆ. 4: ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ತಾಲೂಕಿನ ಹಾಲುಮಡ್ಡಿ ಬಳಿ ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬೃಹತ್ ಮರ ರಸ್ತೆ ಮೇಲೆ ಉರುಳಿಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ಮರ ರಸ್ತೆ ಮಧ್ಯಭಾಗಕ್ಕೆ ಬಿದ್ದ ಪರಿಣಾಮ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯರು ವಿಷಯವನ್ನು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ತಿಳಿಸಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯಾಚರಣೆ ಕೈಗೊಂಡರು.

Banner Ad

ಜೆಸಿಬಿ ಹಾಗೂ ಸಿಬ್ಬಂದಿಯ ನೆರವಿನಿಂದ ರಸ್ತೆ ಮೇಲಿದ್ದ ಮರವನ್ನು ತೆರವುಗೊಳಿಸಿದ ಬಳಿಕ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು. ಮರ ಉರುಳಿಬಿದ್ದ ಪರಿಣಾಮ ವಿದ್ಯುತ್ ತಂತಿಗಳೂ ತುಂಡಾಗಿದ್ದು, ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾದ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ನಿರಂತರ ಮಳೆಯ ಹಿನ್ನೆಲೆಯಲ್ಲಿ ರಸ್ತೆ ಬದಿಯ ಮರಗಳು ಉರುಳುವ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಸವಾರರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಅಗತ್ಯವಿದ್ದರೆ ಅತ್ಯಂತ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Please Share: