ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಡವಾಡದ ಮಾರುತಿ ದೇವಸ್ಥಾನದಿಂದ ಸುಂಕೇರಿ–ಕಡವಾಡ ಸೇತುವೆವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೃಹದಾಕಾರದ ಗಿಡಗಂಟಿಗಳು ಬೆಳೆದು ನಿಂತಿದ್ದು, ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ ಎಂದು ಕರವೇ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆಯ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ರಸ್ತೆ ಕಿರಿದಾಗಿದ್ದು, ಬಸ್, ಲಾರಿ, ಕಾರು ಹಾಗೂ ರಿಕ್ಷಾಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜೀವದ ಹಂಗು ತೊರೆದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಮಸ್ಯೆ ಕಾರವಾರ–ಇಳಕಲ್–ಕೈಗಾ ರಾಜ್ಯ ಹೆದ್ದಾರಿಯ ಕಡವಾಡದಿಂದ ಕೈಗಾವರೆಗೂ ಇದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ರಸ್ತೆ ಬದಿಯಲ್ಲಿ ಅನಧಿಕೃತ ಟೀ, ಹಣ್ಣು, ಪಾನ್ ಹಾಗೂ ಗುಟ್ಕಾ ಅಂಗಡಿಗಳು ತಲೆ ಎತ್ತಿದ್ದು, ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮುಂದುವರಿದಿದೆ. ಅಪಘಾತ ಸಂಭವಿಸಿದರೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ಕೂಡಲೇ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ, ಅನಧಿಕೃತ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರಾಜಾ ನಾಯ್ಕ ಅವರು ಜಿಲ್ಲಾಧಿಕಾರಿಗೆ ವಾಟ್ಸ್‌ಆ್ಯಪ್ ಮೂಲಕ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.


