ಕರಾವಳಿ ವಾಯ್ಸ್ ನ್ಯೂಸ್ 

ಗೋಕರ್ಣ: ಹಿಂದೆ ಮನೆ ಕಳ್ಳತನದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ, ಆರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬ ಮತ್ತೆ ಮನೆ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

Banner Ad

ಅಂಕೋಲಾ ತಾಲೂಕಿನ ತಿಂಗಳಬೈಲ್, ಹಿಲ್ಲೂರು ಗ್ರಾಮದ ಶ್ರೀದೇವಿ ಅನಂತ ಹೆಬ್ಬಾರ್ ಹಾಗೂ ಅವರ ಅಕ್ಕನ ಮಗಳು ಪ್ರೇಮಾ ರಮೇಶ ಹೆಬ್ಬಾರ್ ಅವರಿಗೆ ಸೇರಿದ ಸುಮಾರು 87 ಗ್ರಾಂ ಚಿನ್ನಾಭರಣಗಳು ಮಾರ್ಚ್ 27ರ ರಾತ್ರಿ ಕಳ್ಳತನವಾಗಿದ್ದ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಕ್ರೈಂ ನಂ.47/2026ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಸೆ.16ರಂದು ಭಟ್ಕಳ ತಾಲೂಕಿನ ಹೆಬಳೆ, ಗಾಂಧಿನಗರದ ಪರಮೇಶ್ವರ ಮಾದೇವ ನಾಯ್ಕ (46) ಎಂಬಾತನನ್ನು ಗೋಕರ್ಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸುಮಾರು ₹10.42 ಲಕ್ಷ ಮೌಲ್ಯದ ಚಿನ್ನಾಭರಣಗಳು, ನಾಲ್ಕು ಮೊಬೈಲ್‌ಗಳು, ದೂರುದಾರರು ಹಾಗೂ ಸಾಕ್ಷಿದಾರರಿಗೆ ಸೇರಿದ ಆಧಾರ್ ಕಾರ್ಡ್‌ಗಳು ಮತ್ತು ಮಂಕಿ ಕ್ಯಾಪ್‌ನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ 2003ರಿಂದಲೂ ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈ ಪೈಕಿ ಆರು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಯಾಗಿದ್ದು, ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾದ ಬಳಿಕವೂ ಕಳ್ಳತನ ಪ್ರಕರಣದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾನು ಗುಪ್ತಾ ಅವರ ಮಾರ್ಗದರ್ಶನವಿತ್ತು. ಆರೋಪಿಯನ್ನು ಹಾಗೂ ಕಳವು ಸ್ವತ್ತನ್ನು ಪತ್ತೆಹಚ್ಚಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

 

 

 

 

Please Share: