ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB), ಬೆಂಗಳೂರು ವತಿಯಿಂದ 2026ರ ಜುಲೈ ತಿಂಗಳಲ್ಲಿ ನಡೆಸಲಾದ ಬೆರಳಚ್ಚು ಹಾಗೂ ಶೀಘ್ರಲಿಪಿ (ಟೈಪ್ರೈಟಿಂಗ್ ಮತ್ತು ಶಾರ್ಟ್ಹ್ಯಾಂಡ್) ಪರೀಕ್ಷೆಯಲ್ಲಿ ನಗರದ ರಾಧಾಕೃಷ್ಣ ದೇವಸ್ಥಾನದ ಸಮೀಪದಲ್ಲಿರುವ ನ್ಯಾಷನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಒಟ್ಟು 8 ವಿದ್ಯಾರ್ಥಿಗಳು ಅತ್ಯುನ್ನತ ‘ಡಿಸ್ಟಿಂಕ್ಷನ್’ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಸೀನಿಯರ್ ವಿಭಾಗದಲ್ಲಿ ರಶ್ಮಿ ಹನುಮಂತ ಗೌಡ ಹಾಗೂ ಅನ್ವೇಷಾ ಉದಯ ನಾಯ್ಕ ಡಿಸ್ಟಿಂಕ್ಷನ್ ಸಾಧಿಸಿದ್ದಾರೆ.

ಇಂಗ್ಲಿಷ್ ಜೂನಿಯರ್ ವಿಭಾಗದಲ್ಲಿ ನಾಗಶ್ರೀ ಸಂತೋಷ ದುರ್ಗೇಕರ, ದೀಕ್ಷಾ ಶ್ರೀಪಾದ ಗೌಡ, ಅನುಷಾ ಗೋವಿಂದ ಗೌಡ ಹಾಗೂ ವೈಷ್ಣವಿ ಉಲ್ಲಾಸ ಪೆಡ್ನೇಕರ್ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಜೂನಿಯರ್ ವಿಭಾಗದಲ್ಲಿ ಅನುಷಾ ಗೋವಿಂದ ಗೌಡ, ಅನ್ವಿತಾ ಅಶೋಕ ಬಾಂದೇಕರ ಹಾಗೂ ಪವಿತ್ರಾ ಬಾಬು ದಾಮ್ಸೆಕರ್ ಉತ್ತಮ ಸಾಧನೆ ಮಾಡಿದ್ದಾರೆ.
ಇದಲ್ಲದೆ, ಸಂಸ್ಥೆಯ ಇನ್ನೂ 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಟೈಪಿಂಗ್ ಮತ್ತು ಶಾರ್ಟ್ಹ್ಯಾಂಡ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲ ಪ್ರಸನ್ನ ತೆಂಡೂಲ್ಕರ್ ಹರ್ಷ ವ್ಯಕ್ತಪಡಿಸಿ, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ತರಬೇತಿಯ ಫಲವಾಗಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
1929ರಲ್ಲಿ ಸ್ಥಾಪನೆಯಾದ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ನ್ಯಾಷನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ವಾಣಿಜ್ಯ ಹಾಗೂ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಟೈಪಿಂಗ್ ಮತ್ತು ಶಾರ್ಟ್ಹ್ಯಾಂಡ್ ತರಬೇತಿಗೂ ಅವಕಾಶ ಕಲ್ಪಿಸುತ್ತಿದೆ. ಇತ್ತೀಚಿನ ಪರೀಕ್ಷೆಯ ಫಲಿತಾಂಶವು ಸಂಸ್ಥೆಯಲ್ಲಿ ನೀಡಲಾಗುತ್ತಿರುವ ತರಬೇತಿಯ ಗುಣಮಟ್ಟಕ್ಕೆ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.



