ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ಕನ್ನಡಿಗರ ಸಂಸ್ಕೃತಿ ಹಾಗೂ ಅಸ್ಮಿತೆಯ ಪ್ರತೀಕವೆಂದೇ ಗುರುತಿಸಿಕೊಂಡಿರುವ ಬನವಾಸಿಯ ಐತಿಹಾಸಿಕ ಮಧುಕೇಶ್ವರ ದೇವಸ್ಥಾನದ ಸೋರಿಕೆ ಸಮಸ್ಯೆಗೆ ಕೊನೆಗೂ ತಾತ್ಕಾಲಿಕ ಪರಿಹಾರ ದೊರೆತಿದೆ. ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಟಾರ್ಪಾಲ್ ಅಳವಡಿಸಿದ್ದ ಭಾರತೀಯ ಪುರಾತತ್ವ ಇಲಾಖೆ ಇದೀಗ ಜಲ ನಿರೋಧಕ ಕಾಮಗಾರಿ ಕೈಗೊಂಡಿದ್ದು, ಟಾರ್ಪಾಲ್ ತೆರವುಗೊಳಿಸಿದೆ.

ಸುಮಾರು 1,500 ವರ್ಷಗಳ ಇತಿಹಾಸ ಹೊಂದಿರುವ ಮಧುಕೇಶ್ವರ ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನೆಲೆಗೊಂಡಿದ್ದು, ರಾಜ್ಯದ ಪ್ರಮುಖ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ದೇವಸ್ಥಾನದ ವಿವಿಧ ಭಾಗಗಳಲ್ಲಿ ನೀರು ಸೋರಿಕೆಯಾಗುತ್ತಿದ್ದ ಕಾರಣ ದೇವಾಲಯದ ಸಂರಕ್ಷಣೆ ಬಗ್ಗೆ ಸ್ಥಳೀಯರು ಹಾಗೂ ಭಕ್ತರು ಆತಂಕ ವ್ಯಕ್ತಪಡಿಸಿದ್ದರು.

ಸೋರಿಕೆ ತಡೆಯಲು ತಾತ್ಕಾಲಿಕವಾಗಿ ಹಾಕಲಾಗಿದ್ದ ಟಾರ್ಪಾಲ್‌ನಿಂದ ದೇವಾಲಯದ ಆಕರ್ಷಣೆ ಮತ್ತು ಐತಿಹಾಸಿಕ ಸೌಂದರ್ಯ ಮಸುಕಾಗಿತ್ತು. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಪುರಾತತ್ವ ಇಲಾಖೆಯ ಗಮನ ಸೆಳೆದಿದ್ದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದರು.

ಇದೀಗ ಪುರಾತತ್ವ ಇಲಾಖೆ ದೇವಸ್ಥಾನದ ಮೇಲ್ಭಾಗದಲ್ಲಿ ವಾಟರ್‌ಪ್ರೂಫಿಂಗ್ ಕಾಮಗಾರಿ ಆರಂಭಿಸಿದ್ದು, ಇದರ ಭಾಗವಾಗಿ ಟಾರ್ಪಾಲ್ ತೆರವುಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸೋರಿಕೆ ಸಮಸ್ಯೆ ಸಂಪೂರ್ಣ ನಿವಾರಣೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

ದೇವಾಲಯದ ಸಂರಕ್ಷಣೆಗಾಗಿ ಕೈಗೊಂಡಿರುವ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಐತಿಹಾಸಿಕ ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

Please Share: