ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮಾದಕ ವಸ್ತುಗಳ ಅಕ್ರಮ ಸಾಗಾಟ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬನ ವಿರುದ್ಧ PIT-NDPS ಕಾಯ್ದೆಯಡಿ ಬಂಧನದಲ್ಲಿಡುವಂತೆ ಆದೇಶ ಹೊರಡಿಸಲಾಗಿದ್ದು, ಆತನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹಬ್ಬುವಾಡದ ನಿವಾಸಿ ಇಬ್ರಾಹಿಂ ದವಳಸಾಬ ಚೋಪದಾರ (22) ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಕಾರವಾರ ಶಹರ, ಅಂಕೋಲಾ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಪ್ರತಿಬಂಧಕ ಕ್ರಮದ ಅಡಿಯಲ್ಲಿ ಮತ್ತೊಂದು ಪ್ರಕರಣವೂ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಹಿಂದಿನ ಪ್ರಕರಣಗಳಲ್ಲಿ ಜಾಮೀನು ಪಡೆದ ಬಳಿಕವೂ ಕಾನೂನುಬಾಹಿರ ಕೃತ್ಯಗಳನ್ನು ಮುಂದುವರಿಸಿರುವ ಕುರಿತು ವರದಿಗಳು ಲಭ್ಯವಾಗಿದ್ದವು. ಈ ಹಿನ್ನೆಲೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆತನ ವಿರುದ್ಧ (PIT-NDPS) Act-1988ರ ಕಲಂ 3(1) ಅಡಿಯಲ್ಲಿ ಬಂಧನ ಕ್ರಮ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಲಾಗಿತ್ತು.
ಕಾರವಾರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಕಾರವಾರ ಉಪವಿಭಾಗದ ಡಿವೈಎಸ್ಪಿ ಅವರ ಶಿಫಾರಸಿನ ಮೇರೆಗೆ, ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಸಲ್ಲಿಸಲಾದ ವರದಿಯನ್ನು ಪರಿಶೀಲಿಸಿದ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಆರೋಪಿಯನ್ನು ಬಂಧನದಲ್ಲಿಡಲು ಆದೇಶ ನೀಡಿದ್ದಾರೆ.
ಆದೇಶದಂತೆ ಆರೋಪಿಯನ್ನು ವಶಕ್ಕೆ ಪಡೆದು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
