ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನ ಬೆಡಸಗಾಂವ್ ಸಮೀಪ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಸಾರ್ವಜನಿಕರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.

Banner Ad

ಯಲ್ಲಾಪುರ ತಾಲೂಕಿನ ಚವತ್ತಿ ಕಡೆಯಿಂದ ಉಮ್ಮಚಗಿ–ಮಾವಿನಕಟ್ಟಾ–ಬೆಡಸಗಾಂವ್ ಮಾರ್ಗವಾಗಿ ಮೂರು ಸಣ್ಣ ಕರುಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಸ್ಥಳೀಯರಾದ ಮೇಘರಾಜ ಪಟಗಾರ, ಸುಬ್ರಹ್ಮಣ್ಯ ದೇವಾಡಿಗ, ಮಣಿಕಂಠ ನಾಯ್ಕ, ರೋಹಿತ್ ನಾಯ್ಕ, ನಾಗರಾಜ ನಾಯ್ಕ, ಸುನೀಲ್ ನಾಯ್ಕ, ಧರ್ಮೇಂದ್ರ ಮಾದೇವ ನಾಯ್ಕ ಹಾಗೂ ಸುದೀಪ್ ದೇವಾಡಿಗ ಅವರು ವಾಹನವನ್ನು ತಡೆಗಟ್ಟಿದರು.

ಬಳಿಕ ವಾಹನವನ್ನು ಮಳಗಿ ಪೊಲೀಸರ ವಶಕ್ಕೆ ನೀಡಲಾಯಿತು. ಘಟನೆಯ ಕುರಿತು ಪ್ರಾಥಮಿಕ ಪರಿಶೀಲನೆ ನಡೆಸಿದ ಮಳಗಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮುಂಡಗೋಡ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ವಾಹನ ಹಾಗೂ ಆರೋಪಿಯು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನವರಾಗಿದ್ದಾರೆ ಎನ್ನಲಾಗಿದೆ. ಬುಧವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಜಾನುವಾರು ಸಾಗಾಟದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗಿದೆಯೇ ಹಾಗೂ ಸಾಗಾಟಕ್ಕೆ ಅಗತ್ಯ ದಾಖಲೆಗಳು ಇದ್ದವೆಯೇ ಎಂಬ ಕುರಿತು ಪೊಲೀಸ್ ತನಿಖೆಯಿಂದ ಸ್ಪಷ್ಟತೆ ದೊರೆಯಬೇಕಿದೆ.

 

Please Share: