ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಪುಣೆ ಮೂಲದ ವಿದ್ಯಾರ್ಥಿ ಜೀವನ್ (26) ಅವರ ಮೃತದೇಹ ಮಂಗಳವಾರ ಧಾರೇಶ್ವರ ಸಮೀಪದ ಕಡೆಕೋಡಿ ಬೀಚ್ ಬಳಿ ಪತ್ತೆಯಾಗಿದೆ.

ವಾರಾಂತ್ಯದ ರಜೆ ಕಳೆಯಲು ಪುಣೆಯಿಂದ ಸ್ನೇಹಿತರೊಂದಿಗೆ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ಜೀವನ್ ಹಾಗೂ ಇತರ ನಾಲ್ವರು ಯುವಕರು ಕುಮಟಾದ ಕಡ್ಲೆ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ತಂಗಿದ್ದರು. ಸೋಮವಾರ ಮಧ್ಯಾಹ್ನ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಜೀವನ್ ಪ್ರಬಲ ಅಲೆಗಳಿಗೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಕರಾವಳಿ ಕಾವಲು ಪಡೆ, ಕೆಎನ್‌ಡಿ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಸೋಮವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಜೀವನ್ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮತ್ತೆ ಆರಂಭಿಸಿದ ಶೋಧ ಕಾರ್ಯಾಚರಣೆಯ ವೇಳೆ ಧಾರೇಶ್ವರದ ಕಡೆಕೋಡಿ ಬೀಚ್ ಸಮೀಪ ಮೃತದೇಹ ತೇಲಿ ಬಂದಿರುವುದು ಕಂಡುಬಂದಿದೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ವಾರಾಂತ್ಯದ ಸಂಭ್ರಮಕ್ಕಾಗಿ ಕರಾವಳಿಗೆ ಬಂದಿದ್ದ ಯುವಕರ ತಂಡಕ್ಕೆ ಈ ದುರ್ಘಟನೆ ಆಘಾತ ಉಂಟುಮಾಡಿದ್ದು, ಪ್ರವಾಸಿಗರಲ್ಲಿ ವಿಷಾದದ ವಾತಾವರಣ ನಿರ್ಮಾಣವಾಗಿದೆ.

 

Please Share: