ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ, ಜೂ. 18: ತಾಲೂಕಿನ ಮಿರ್ಜಾನ್ ಸಮೀಪದ ಬೆಣ್ಣೆಹೊಂಡ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ಸುಮಾರು 4ರಿಂದ 5 ವರ್ಷದ ಗಂಡು ಕರಿಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡುಗಡೆ ಮಾಡಿದ್ದಾರೆ.

Banner Ad

ರಾತ್ರಿ ವೇಳೆ ಕರಿಚಿರತೆ ಬಾವಿಗೆ ಬಿದ್ದಿರುವ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಮೊದಲಿಗೆ ಬಾವಿಯೊಳಗೆ ಏಣಿ ಇಳಿಸಿ ಚಿರತೆ ಸ್ವಯಂ ಹೊರಬರಲು ಅವಕಾಶ ಕಲ್ಪಿಸಲಾಯಿತು. ಆದರೆ ಚಿರತೆ ಏಣಿಯ ಮೂಲಕ ಮೇಲಕ್ಕೆ ಬರದೆ ಬಾವಿಯೊಳಗಿನ ಒಟ್ಲಿನಲ್ಲಿ ಆಶ್ರಯ ಪಡೆದಿತ್ತು.

ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ವಿಶೇಷ ಕಾರ್ಯಾಚರಣೆ ನಡೆಸಿ ಬಲೆ ಅಳವಡಿಸಿದರು. ಸುರಕ್ಷಿತವಾಗಿ ಚಿರತೆಯನ್ನು ಬಲೆಯೊಳಗೆ ಸೆರೆಹಿಡಿದು ಹೊರತೆಗೆದ ಬಳಿಕ ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಚಿರತೆ ಆರೋಗ್ಯವಾಗಿರುವುದು ದೃಢಪಟ್ಟ ನಂತರ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಎಸಿಎಫ್ ಕೃಷ್ಣೇಗೌಡ, ಆರ್‌ಎಫ್‌ಒ ರಾಜು ನಾಯ್ಕ, ಡಿವೈಆರ್‌ಎಫ್‌ಒ ಶ್ರೀದೇವಿ, ಯೋಗೇಶ್‌ಗೌಡ, ದರ್ಶನ್, ಪ್ರಸನ್ನ, ಬೀಟ್ ಫಾರೆಸ್ಟರ್‌ಗಳಾದ ಹರೀಶ್, ರಾಜೇಶ್ ಹಾಗೂ ನಾಗರಾಜ, ವಾಚರ್‌ಗಳಾದ ರವಿ ಮತ್ತು ಸಂದೇಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಅಶೋಕ ನಾಯ್ಕ ಅವರ ನೇತೃತ್ವದಲ್ಲಿ ಪವನ ನಾಯ್ಕ, ನಾಗರಾಜ ಶೇಟ್, ಮಹೇಶ ನಾಯ್ಕ, ನಾಗರಾಜ ಹರಿಕಾಂತ ಹಾಗೂ ಗಣೇಶ ಪಟಗಾರ ಸಹ ಕಾರ್ಯಾಚರಣೆಗೆ ಸಹಕರಿಸಿದರು. ಅರಣ್ಯ ಇಲಾಖೆಯ ತ್ವರಿತ ಹಾಗೂ ಯಶಸ್ವಿ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Please Share: