ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಇಲ್ಲಿನ ಕೊಡಿಭಾಗದ ಕಾಳಿ ನದಿ ಸೇತುವೆ ಮೇಲೆ ಸೋಮವಾರ ಸಂಜೆ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ಜೋಧಪುರ ಮೂಲದ, ಸದ್ಯ ಕಾರವಾರದಲ್ಲಿ ವಾಸವಿದ್ದ ಅಶೋಕ ಹೇಮಾರಾಮ (23) ಮೃತಪಟ್ಟ ಯುವಕ. ಅದೇ ಮೂಲದ ಲಕ್ಷ್ಮಣ ಅರ್ಜುನರಾಮ (22) ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಕಾರವಾರದ ಬೈತಖೋಲ್ ಮೂಲದ ಚಿರಾಗ್ ಹಾಗೂ ಹಾವೇರಿ ಮೂಲದ ಗಣೇಶ ಗಾಯಗೊಂಡಿದ್ದಾರೆ.
ಕಾಳಿ ಸೇತುವೆ ಮೇಲೆ ಪಲ್ಸರ್ ಬೈಕ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನಜ್ಜುಗುಜ್ಜಾಗಿವೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸವಾರ ಅಶೋಕ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಚಿರಾಗ್ ನೀಡಿದ ಹೇಳಿಕೆಯ ಪ್ರಕಾರ, ಅವರು ಕಾರವಾರದಿಂದ ಸದಾಶಿವಗಡದ ಕಡೆಗೆ ತೆರಳುತ್ತಿದ್ದಾಗ ವಾಹನದಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟಿ ಡಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದು ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


