ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹಟ್ಟಿಕೇರಿ ಟೋಲ್‌ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿ ವಾಹನ ಸವಾರರ ಪಾಲಿಗೆ ಅಪಾಯದ ಕೂಪವಾಗಿ ಪರಿಣಮಿಸಿದೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ರೀತಿಯಲ್ಲಿ ಕಾಮಗಾರಿ ನಡೆಸಲಾಗಿದ್ದು, ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ನಾಯ್ಕ ಹಟ್ಟಿಕೇರಿ ಗಂಭೀರವಾಗಿ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಿಂದ ಬೆಲೆಕೇರಿ ಸಂಪರ್ಕಿಸುವ ರಸ್ತೆ ಬಳಿ ಹೊಸ ಹೆದ್ದಾರಿ ರಸ್ತೆಯನ್ನು ಏಕಾಏಕಿ ಜೋಡಿಸಲಾಗಿದ್ದು, ಬೆಲೆಕೇರಿ ಕ್ರಾಸ್ ರಸ್ತೆಯೂ ಇದೇ ಸ್ಥಳಕ್ಕೆ ಸೇರುವಂತೆ ಮಾಡಲಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲೇ ಜಂಕ್ಷನ್‌ನಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡುವ ಸೂಕ್ತ ಮಾರ್ಗಸೂಚಿ, ಬೀದಿದೀಪ ಹಾಗೂ ಇತರ ಸುರಕ್ಷತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಂಗಳವಾರ ಸಂಜೆ ಒಂದೇ ಸ್ಥಳದಲ್ಲಿ ನಾಲ್ಕು ವಾಹನಗಳು ಬಂದಾಗ ಸವಾರರು ಗೊಂದಲಕ್ಕೊಳಗಾಗಿದ್ದು, ಕೂದಲೆಳೆಯ ಅಂತರದಲ್ಲಿ ಸಂಭವಿಸಬೇಕಿದ್ದ ಭೀಕರ ಅಪಘಾತ ತಪ್ಪಿದೆ. ವಿಶೇಷವಾಗಿ ಬೆಲೆಕೇರಿ ಕಡೆಗೆ ತಿರುಗುವ ವಾಹನಗಳು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳ ನಡುವೆ ಡಿಕ್ಕಿಯಾಗುವ ಅಪಾಯ ಎದುರಾಗಿದೆ.
ಅಪಘಾತ ಸಂಭವಿಸಿ ಜೀವಹಾನಿಯಾದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನವೇ ಎಚ್ಚೆತ್ತುಕೊಳ್ಳಬೇಕು. ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವ ಮಾರ್ಗಸೂಚಿ ಫಲಕ, ಬೀದಿದೀಪ, ಹಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಇಲ್ಲವಾದರೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸಾರ್ವಜನಿಕರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ನಿತ್ಯಾನಂದ ನಾಯ್ಕ ಹಟ್ಟಿಕೇರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.


